ಬೀದರ್ | ಮೈ ಹೂಂ ಪರ್ವೇಜ್ ಖಾನ್ ಅಲ್ಬಮ್ ಹಾಡು ಬಿಡುಗಡೆ

ಬೀದರ್ : ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಕ್ರೀಡಾಪಟು ಹಾಗೂ ಕರ್ನಾಟಕ ರಾಜ್ಯ ಸ್ಪೋರ್ಟ್ ಕಿಂಗ್‌ನ ರಾಜ್ಯಾಧ್ಯಕ್ಷ ಪರ್ವೇಜ್ ಖಾನ್ ಅವರ ಜೀವನ ಮತ್ತು ಸಾಧನೆ ಆಧರಿಸಿದ 'ಮೈ ಹೂಂ ಪರ್ವೇಜ್ ಖಾನ್' ಅಲ್ಬಮ್ ಹಾಡನ್ನು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಲಾಯಿತು.
ಹಾಡು ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಡಾ. ಮುಹ್ಮದ್ ಇಮ್ರಾನ್ ಸಯೀದ್ ಅವರು ಮಾತನಾಡಿ, ಈ ಹಾಡಿನಲ್ಲಿ ಪರ್ವೇಜ್ ಖಾನ್ ಅವರ ವ್ಯಕ್ತಿತ್ವ ಹಾಗೂ ಸಾಧನೆಗಳನ್ನು ಬಿಂಬಿಸುವುದರ ಜೊತೆಗೆ ಬೀದರ್ ಜಿಲ್ಲೆಯ ಐತಿಹಾಸಿಕ ತಾಣಗಳನ್ನು ಚಿತ್ರಿಸಲಾಗಿದೆ ಎಂದರು.
ಯುವಜನತೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಹಾಡು ನಿರ್ಮಾಣವಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಇದು ಸ್ಪೂರ್ತಿದಾಯಕವಾಗಲಿದೆ ಎಂದು ಹೇಳಿದರು.
ಮಹಾರಾಷ್ಟ್ರ ಮೂಲದ ರೂಬಿನ್ ಮ್ಯೂಸಿಕ್ ಕಂಪೆನಿ ಈ ಹಾಡನ್ನು ನಿರ್ಮಿಸಿದ್ದು, ಜಗತ್ತಿನ 250ಕ್ಕೂ ಹೆಚ್ಚು ಆಡಿಯೊ ಪ್ಲಾಟ್‌ಫಾರ್ಂ ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಜೊತೆಗೆ 45 ಯೂಟ್ಯೂಬ್ ಮ್ಯೂಸಿಕ್ ಚಾನೆಲ್‌ಗಳು, ಗಾನಾ.ಕಾಮ್ ಹಾಗೂ ಸಾರೆಗಮ ಸೇರಿದಂತೆ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಹಾಡು ಲಭ್ಯವಾಗಲಿದೆ. ಹೈದರಾಬಾದ್‌ನ ಎ.ಆರ್. ಇಂಡಸ್ಟ್ರೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಮೂಲಕ ಯೂಟ್ಯೂಬ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಾಡು ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಪರ್ವೇಜ್ ಖಾನ್ ಅವರ ಮುಂದಿನ ಅಲ್ಬಮ್ ಹಾಡು ಜು. 5ರಂದು ಬಿಡುಗಡೆಯಾಗಲಿದ್ದು, ಅದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ ಎಂದು ಡಾ.ಇಮ್ರಾನ್ ಸಯೀದ್ ಅವರು ಹೇಳಿದರು.
ಈ ಸಂದರ್ಭದಲ್ಲಿ ನಾಯಕಿ ಮುಸ್ಕಾನ್ ಮುಜಾವರ್, ಸಂಗೀತ ನಿರ್ದೇಶಕ ರೋಬಿನ್ ಮುಜಾವರ್, ನಿರ್ಮಾಪಕ ಸತೀಶ್ ಶರ್ಮಾ ನಂದಿ, ಸಾಮಾಜಿಕ ಜಾಲತಾಣ ಪ್ರಭಾವಿ ರಘುಪ್ರಿಯಾ, ಕಿಕ್ ಬಾಕ್ಸಿಂಗ್ ಕೋಚ್ ಸುವಿತ್ ಮೋರೆ, ಕರಾಟೆ ಕೋಚ್ ಸೂರ್ಯಕಾಂತ್ ಮೋರೆ, ನಟ ಅಯಾನ್ ಖಾನ್, ಸಮಾಜ ಸೇವಕ ನವಾಜ್ ಖಾನ್ ಹಾಗೂ ಕ್ರಿಯೇಟಿವ್ ಸದಸ್ಯೆ ಪೂಜಾ ಪಿಟ್ಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.






