ಬೀದರ್ | ಔರಾದ್ ನ ಸಮಗ್ರ ಅಭಿವೃದ್ಧಿಯೇ ನನ್ನ ಪರಮ ಸಂಕಲ್ಪ : ಶಾಸಕ ಪ್ರಭು ಚವ್ಹಾಣ್

ಬೀದರ್ : ಔರಾದ್ (ಬಿ) ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ ನಾನು ಕೆಲಸ ಮಾಡುತ್ತಿದ್ದು, ಈ ದಿಶೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದೇನೆ ಎಂದು ಶಾಸಕ ಪ್ರಭು ಚವ್ಹಾಣ್ ಅವರು ತಿಳಿಸಿದರು.
ಇಂದು ಔರಾದ್ (ಬಿ) ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಜನತೆಯ ಆಶೀರ್ವಾದದಿಂದ ಜನಸೇವೆ ಮಾಡುವ ಅವಕಾಶ ಸಿಕ್ಕಿದೆ. ಅವರ ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದ ಔರಾದ್ (ಬಿ) ಕ್ಷೇತ್ರ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದೆ. ಈ ಹಿಂದಿನ ದಿನಗಳಲ್ಲಿ ರಸ್ತೆಗಳೇ ಇರಲಿಲ್ಲ. ಇದೀಗ ಎರಡು ರಾಷ್ಟ್ರೀಯ ಹೆದ್ದಾರಿಗಳಾಗಿವೆ. ಮಾಳೆಗಾಂವ್, ಚಿಮ್ಮೇಗಾಂವ್ ಗ್ರಾಮಗಳ ವ್ಯಾಪ್ತಿಯಲ್ಲಿ 164 ಎಕರೆಯಲ್ಲಿ ಕೇಂದ್ರ ಸರ್ಕಾರದಿಂದ 2,147 ಕೋಟಿ ರೂ. ವೆಚ್ಚದಲ್ಲಿ ಪವರ್ ಗ್ರಿಡ್ ಸೆಂಟರ್‌ನ ಕಾಮಗಾರಿ ನಡೆಯುತ್ತಿದೆ ಎಂದರು.
ಕ್ಷೇತ್ರದ 36 ಕೆರೆಗಳು ತುಂಬಿಸುವ 560 ಕೋಟಿ ರೂ. ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಟೆಂಡರ್ ಆಗಿದೆ. ಜಲ ಜೀವನ ಮಿಷನ್ ಯೋಜನೆ, ನಾಗೂರ್ (ಬಿ) ಗ್ರಾಮದಲ್ಲಿ 118 ಕೋಟಿ ರೂ. ವೆಚ್ಚದ 220 ಕೆ.ವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಹಂತದಲ್ಲಿದೆ. ಬಲ್ಲೂರ್ (ಜೆ) ಗ್ರಾಮದಲ್ಲಿ ಸಿಪೆಟ್ ಕೇಂದ್ರಕ್ಕೆ 90 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದು, ಕೆಲಸ ಆರಂಭವಾಗಬೇಕಿದೆ. ಕಾರಂಜಾ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡುವ 84 ಕೋಟಿ ರೂ. ಮೊತ್ತದ ಯೋಜನೆ ಆರಂಭವಾಗಬೇಕಿದೆ. 34.49 ಕೋಟಿ ರೂ. ಯ ಜಾನುವಾರು ತಳಿ ಸಂವರ್ಧನಾ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್ ಪಾಟೀಲ್, ಪಟ್ಟಣ ಪಂಚಾಯತ್ ಅಧ್ಯಕ್ಷ ಸರುಬಾಯಿ ಘೂಳೆ, ಧೊಂಡಿಬಾ ನರೋಟೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ್, ಶಿವಕುಮಾರ್ ಘಾಟೆ, ಡಾ.ಗಾಯತ್ರಿ, ರವೀಂದ್ರ ಹಾಗೂ ಧೂಳಪ್ಪ ಸೇರಿದಂತೆ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.







