ಬೀದರ್ | ಯುವಜನರಿಗೆ ಉದ್ಯೋಗ ಒದಗಿಸುವುದೇ ಮೈಸೂರು ಸಿಪೇಟ್‌ನ ಗುರಿ : ಭೀಮಾಚಾರಿ

ಬೀದರ್ : ಎಸೆಸೆಲ್ಸಿ ಹಾಗೂ ಪಿಯುಸಿ ಕಲಿತ ನಿರುದ್ಯೋಗಿ ಯುವಜನರಿಗೆ ಡಿಪ್ಲೊಮಾ ತರಬೇತಿ ನೀಡಿ ಉದ್ಯೋಗ ಒದಗಿಸುವುದೇ ಮೈಸೂರು ಸಿಪೇಟ್‌ನ ಮುಖ್ಯ ಗುರಿಯಾಗಿದೆ ಎಂದು ಕೇಂದ್ರಿಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ತಾಂತ್ರಿಕ ಅಧಿಕಾರಿ ಭೀಮಾಚಾರಿ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಮೆಟ್ರಿಕ್ ನಂತರದ ಯುವಜನರಿಗೆ ಉದ್ಯೋಗ ಒದಗಿಸುವ ಭರವಸೆಯ ಕೇಂದ್ರವಾಗಿದೆ. ಐದು ದಶಕಗಳಿಗಿಂತ ಹೆಚ್ಚಿನ ಹೆಮ್ಮೆಯ ಇತಿಹಾಸ ಹೊಂದಿರುವ ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಹೇಳಿದರು.
ಪ್ಲಾಸ್ಟಿಕ್ ಉತ್ಪನ್ನಗಳು ದೇಶದ ಪ್ರಗತಿಗೂ ತಮ್ಮದೆಯಾದ ಕೊಡುಗೆ ನೀಡುತ್ತಿವೆ. ಹಾಗಾಗಿ ಇವುಗಳ ಉತ್ಪನ್ನಗಳ ತಯಾರಿ ಉತ್ತೇಜಿಸಲು ಕೇಂದ್ರ ಸರ್ಕಾರವು ಈ ಸಂಸ್ಥೆಯನ್ನು 1968 ರಲ್ಲಿ ಸ್ಥಾಪಿಸಿದೆ. ಇದು 1991 ರಲ್ಲಿ ಕರ್ನಾಟಕದ ಮೈಸೂರಲ್ಲಿ ಆರಂಭವಾಯಿತು. ಪಾಲಿಮರ್, ಪ್ಲಾಸ್ಟಿಕ್ ಕೈಗಾರಿಕೆ ಕುರಿತ ಕೋರ್ಸ್ ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಇದಾಗಿದೆ ಎಂದರು.
ಮೈಸೂರು ಸಿಪೇಟ್ ನ ಸಹಾಯಕ ತಾಂತ್ರಿಕ ಅಧಿಕಾರಿ ಸದಾಶಿವಪ್ಪ ಅವರು ಮಾತನಾಡಿ, ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ ಹಾಗೂ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ ಕೋರ್ಸ್ ಗಳು ಎಸೆಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ 3 ವರ್ಷ ಹಾಗೂ ಪಿಯುಸಿ ಅಥವಾ ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ 2 ವರ್ಷ ತರಬೇತಿ ನೀಡಲಾಗುತ್ತದೆ. ವಸತಿ ಸಹಿತ ತರಬೇತಿ ಇದಾಗಿದ್ದು, ತರಬೇತಿ ಮುಗಿಯುವವರೆಗೆ 1 ಲಕ್ಷ 40 ಸಾವಿರ ರೂ. ನಲ್ಲಿ ವಸತಿ ಹಾಗೂ ಊಟ ಸಹಿತ ತರಬೇತಿ ನೀಡಲಾಗುವುದು. ತರಬೇತಿ ಮುಗಿದ ಬಳಿಕ ಕಡ್ಡಾಯವಾಗಿ ಉದ್ಯೋಗ ಒದಗಿಸುವುದು ಸಿಪೇಟ್ ಸಂಸ್ಥೆಯ ಪ್ರಥಮ ಆದ್ಯತೆಯಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಆಸಕ್ತ ಎಸೆಸೆಲ್ಸಿ, ಪಿ.ಯು.ಸಿ ಹಾಗೂ ಐಟಿಐ ಪಾಸಾದ ವಿದ್ಯಾರ್ಥಿಗಳು ಈ ಅವಕಾಶ ತಮ್ಮದಾಗಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 96636 13275, 94834 31968, ಹಾಗೂ 0821-2516322 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.







