ಬೀದರ್ : ಮೊಳಕೇರಾ ಗ್ರಾಮದಲ್ಲಿ ನಿಗೂಢ ವಸ್ತು ಸ್ಫೋಟ; ಆರು ಮಂದಿಗೆ ಗಂಭೀರ ಗಾಯ

ಹುಮನಾಬಾದ್: ನಿಗೂಢ ವಸ್ತು ಸ್ಫೋಟಗೊಂಡು ಐದು ವಿದ್ಯಾರ್ಥಿಗಳು ಸೇರಿ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಗಾಯಗೊಂಡವರನ್ನು ಮೊಳಕೇರಾ ಗ್ರಾಮದ ಜಬ್ಬಾರ ಸಾಬ್ (70), ಅನ್ವರ್ (18), ಅರ್ಜಾನ್ (8), ಆರೀಶ್ (6), ಮಸ್ತಾನ್ (8) ಮತ್ತು ಬುಶೇರಾ (3) ಎಂದು ಗುರುತಿಸಲಾಗಿದೆ.
ಶನಿವಾರ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವೇಳೆ ನಿಗೂಢ ವಸ್ತು ಏಕಾಏಕಿ ಸ್ಫೋಟಗೊಂಡಿದ್ದು, ಐದು ವಿದ್ಯಾರ್ಥಿಗಳು ಹಾಗೂ ಒಬ್ಬ ವಯಸ್ಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಗಮನಾರ್ಹವಾಗಿ, ಕೆಲ ದಿನಗಳ ಹಿಂದೆ ಇದೇ ಮೊಳಕೇರಾ ಗ್ರಾಮದಲ್ಲಿ ನಿಗೂಢ ವಸ್ತು ಸ್ಫೋಟಗೊಂಡು ಬಾಲಕನೊಬ್ಬ ಕಾಲು ಕಳೆದುಕೊಂಡ ಘಟನೆ ನಡೆದಿತ್ತು. ಇದಾದ ಬಳಿಕವೂ ಸುಮಾರು ನಾಲ್ಕು–ಐದು ಬಾರಿ ಇಂತಹ ಸ್ಫೋಟಗಳ ಘಟನೆಗಳು ನಡೆದಿವೆ. ಆದರೆ ಯಾವ ವಸ್ತು ಸ್ಫೋಟಗೊಳ್ಳುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಹಿಂದಿನ ಘಟನೆಗಳ ಸಂದರ್ಭದಲ್ಲಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದರೆ ಇಂತಹ ಅವಘಡಗಳು ಮರುಕಳಿಸುತ್ತಿರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತರು, ಹುಮನಾಬಾದ್ ತಹಸೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾಧಿಕಾರಿಗಳೂ ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.







