Bidar | ಆ.30ರಂದು ನಾರಾಯಣ ಗುರು, ಡಿ.ದೇವರಾಜ ಅರಸು ಜಯಂತ್ಯೋತ್ಸವ : ಡಾ.ಸೇಡಂಕರ್
ಬಿ.ಕೆ ಹರಿಪ್ರಸಾದ್, ಸಂತೋಷ್ ಲಾಡ್‌ಗೆ ಅಭಿನಂದನಾ ಸಮಾರಂಭ

ಬೀದರ್: ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಒಕ್ಕೂಟ ಹಾಗೂ ಬೀದರ್ ಜಿಲ್ಲಾ ಆರ್ಯ ಈಡಿಗ ಸಮಾಜಗಳ ಸಹಯೋಗದಲ್ಲಿ ಆ.30ರಂದು ನಗರದ ಬೆಲ್ದಾಳೆ ಕನ್ವೆನ್ಶನ್ ಹಾಲ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತ್ಯೋತ್ಸವ ಹಾಗೂ ಕೆಪಿಸಿಸಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಾ. ರಾಜಶೇಖರ್ ಸೇಡಂಕರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.30ರಂದು ಬೆಳಿಗ್ಗೆ 9 ಗಂಟೆಗೆ ನಗರದ ಶಿವಾಜಿ ಚೌಕ್‌ನಿಂದ ಅಲಂಕೃತ ರಥದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯು ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಸಾಯಿ ಶಾಲೆಯ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಈ ಹಿಂದೆ ಪ್ರತ್ಯೇಕ ಸಮುದಾಯಗಳಿಂದ ಆಚರಿಸಲಾಗುತ್ತಿದ್ದ ನಾರಾಯಣ ಗುರು ಮತ್ತು ದೇವರಾಜ ಅರಸು ಜಯಂತಿಯನ್ನು ಈ ಬಾರಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಶೋಷಿತ ಸಮುದಾಯಗಳು ಒಗ್ಗೂಡಿ ಆಚರಿಸುತ್ತಿರುವುದು ವಿಶೇಷವಾಗಿದೆ ಎಂದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ಬೆಲ್ದಾರ್ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು ಎಂಬ ಒತ್ತಾಯದೊಂದಿಗೆ ಶೋಷಿತ ಸಮುದಾಯಗಳ ಒಕ್ಕೂಟದ ಸಮಾವೇಶವನ್ನೂ ಆಯೋಜಿಸಲಾಗಿದೆ ಎಂದು ಹೇಳಿದರು.
2015ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನ್ಯಾಯವಾದಿ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲು ಆದೇಶಿಸಿತ್ತು. ವರದಿ ಸಿದ್ಧವಾಗುವ ವೇಳೆಗೆ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಅದು ಮುಂದಿನ ಹಂತಕ್ಕೆ ಸಾಗಲಿಲ್ಲ. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳ ಅವಧಿಯಲ್ಲಿಯೂ ವರದಿ ಸ್ವೀಕಾರ ಮತ್ತು ಬಿಡುಗಡೆ ಕುರಿತು ನಿರ್ಧಾರವಾಗಿರಲಿಲ್ಲ ಎಂದು ವಿವರಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ್ ಮಾಳಗೆ ಮಾತನಾಡಿ, 2023ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಮಧುಸೂಧನ್ ನಾಯಕ್ ಅವರ ನೇತೃತ್ವದಲ್ಲಿ ವರದಿ ಸಿದ್ಧವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದ್ದರಿಂದ ವರದಿಯನ್ನು ಸಾರ್ವಜನಿಕಗೊಳಿಸಿ, ಅದರ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗೆ ಶೇ.17, ಪರಿಶಿಷ್ಟ ಪಂಗಡಕ್ಕೆ ಶೇ.7 ಹಾಗೂ ಹಿಂದುಳಿದ ವರ್ಗಗಳಿಗೆ ಶೇ.40ರಷ್ಟು ಮೀಸಲಾತಿ ಕಲ್ಪಿಸಬೇಕು. ಸಂವಿಧಾನದ ಆಶಯದಂತೆ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಮ್ಮ ಮನವಿಗೆ ಸ್ಪಂದಿಸದೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸದಿದ್ದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧವೂ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಆರ್ಯ ಈಡಿಗ ಸಮಾಜದ ಅಧ್ಯಕ್ಷ ಸುಭಾಷ ಚಿದ್ರಿ ಮಾತನಾಡಿ, ಒಬಿಸಿ ಆರ್ಮಿ ಒಕ್ಕೂಟದ ಅಧ್ಯಕ್ಷ ತಾನಾಜಿ ಸಗರ್ ಹಾಗೂ ಈಡಿಗ ಸಮಾಜದ ಸಂಗಯ್ಯ ಸುಲ್ತಾನಪುರ್, ಒಬಿಸಿ ಆರ್ಮಿ ಕಾರ್ಯಾಧ್ಯಕ್ಷ ರಾಜಕುಮಾರ್ ಟಿಳ್ಳೆಕರ್, ಶೋಷಿತ ಸಮುದಾಯಗಳ ಮುಖಂಡ ಸುನಿಲ್ ಖಾಶೆಂಪುರ್, ಗೊಂಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ್ ಚಿಮಕೊಡೆ, ಆರೋಗ್ಯ ಕವಚ ಸದಸ್ಯ ಶಿವಕುಮಾರ್ ನೀಲಿಕಟ್ಟಿ, ಬಿವಿಎಸ್ ಜಿಲ್ಲಾಧ್ಯಕ್ಷ ಪ್ರದೀಪ್ ನಾಟೇಕರ್, ಶ್ರೀಪತರಾವ್ ದೀನೆ ಹಾಗೂ ಶ್ರೀಮಂತ್ ತೆಲಂಗ ಇದ್ದರು.






