ಬೀದರ್ | 20 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಮಾದಕ ದ್ರವ್ಯ ಜಪ್ತಿ : ಪ್ರಕರಣ ದಾಖಲು

ಬೀದರ್ : ನಗರದ ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಅಧಿಕ ಮೌಲ್ಯದ ಮಾದಕ ದ್ರವ್ಯ ಹಾಗೂ 20 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಲಾಡಗೇರಿಯ ಓಣಿ ರಸ್ತೆಯ ಕ್ರಾಸ್ ಸಮೀಪ ಒಬ್ಬ ವ್ಯಕ್ತಿ ಮೋಟಾರ್ ಸೈಕಲ್‌ನಲ್ಲಿ ಕಾಟನ್ ಬಾಕ್ಸ್ ಹಾಗೂ ಪ್ಲಾಸ್ಟಿಕ್ ಕವರ್‌ನಲ್ಲಿ ನಾರ್ಕೋಟಿಕ್ ಮಾದಕ ದ್ರವ್ಯ ಅಂಶ ಹೊಂದಿರುವ ಗುಳಿಗೆಗಳು ಮತ್ತು ಸಿರಪ್ ಬಾಟಲಿಗಳನ್ನು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಗಾಂಧಿಗಂಜ್ ಪೊಲೀಸ್ ಠಾಣೆಯ ಪಿಐ ಆನಂದರಾವ್ ಅವರು ತಮ್ಮ ಠಾಣೆಯ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದರು.
ಪಂಚರ ಸಮಕ್ಷಮ ಹಾಗೂ ಗೆಜೆಟೆಡ್ ಅಧಿಕಾರಿ ಎಡಿಸಿ ಮತ್ತು ಸಿಪಿಐ ಅವರ ಸಮ್ಮುಖದಲ್ಲಿ ಕಾಟನ್ ಬಾಕ್ಸ್ ಪರಿಶೀಲನೆ ನಡೆಸಿದಾಗ, ಅದರೊಳಗೆ ಮಾದಕ ದ್ರವ್ಯ ವಸ್ತುಗಳು ಪತ್ತೆಯಾಗಿವೆ.
ಈ ದಾಳಿಯಲ್ಲಿ ಒಟ್ಟು 20,882 ರೂ. ಮೌಲ್ಯದ ಮಾದಕ ದ್ರವ್ಯ ವಸ್ತುಗಳು ಹಾಗೂ 20,000 ರೂ. ಮೌಲ್ಯದ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







