ಬೀದರ್ | ರಾಷ್ಟ್ರೀಯ ಡೆಂಗ್ಯೂ ಜನಜಾಗೃತಿ ಜಾಥಾಕ್ಕೆ ಚಾಲನೆ
ಆರೋಗ್ಯ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಸಹಕರಿಸಲು ಡಾ.ಶಂಕ್ರಪ್ಪ ಬೊಮ್ಮಾ ಮನವಿ

ಬೀದರ್ : ಡೆಂಗ್ಯೂ ಪ್ರಕರಣಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಡೆಂಗ್ಯೂ, ಚಿಕನ್ ಗುನ್ಯಾ ಹರಡಿಸುವ ಸೊಳ್ಳೆಗಳ ನಿರ್ಮೂಲನೆಗಾಗಿ ನಿರಂತರವಾಗಿ ಕಾರ್ಯ ಕೈಕೊಳ್ಳಲಾಗುತ್ತಿದೆ. ಇದರಿಂದಾಗಿ ಆರೋಗ್ಯ ಸಿಬ್ಬಂದಿ ನಿಮ್ಮ ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕ್ರಪ್ಪ ಬೊಮ್ಮಾ ಅವರು ತಿಳಿಸಿದರು.
ಇಂದು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ನಿಮಿತ್ತ ನಗರದಲ್ಲಿ ಸರಕಾರಿ ಶುಶ್ರೂಷ ಕಾಲೇಜು ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಕ್ಕೆ ಹಸಿರು ಬಾವೂಟದ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಹಾಯಕರು ಪ್ರತಿ ತಿಂಗಳು ಮೊದಲನೇ ಶುಕ್ರವಾರ ಮತ್ತು ಮೂರನೇ ಶುಕ್ರವಾರದಂದು ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಹಾಗೂ ನಿರ್ಮೂಲನೆ ಕಾರ್ಯವನ್ನು ನಿರಂತರವಾಗಿ ಕೈಕೊಳ್ಳುತ್ತಿದ್ದಾರೆ. ಆರೋಗ್ಯ ಸಿಬ್ಬಂದಿಗಳು ತಮ್ಮ ಮನೆಗಳಿಗೆ ಭೇಟಿ ನೀಡಿದಾಗ, ಸಿಬ್ಬಂದಿಗಳಿಗೆ ಸಹಕಾರ ನೀಡಿ ಅವರ ಸೂಚನೆ ಅನುಸಾರ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ನಿಯಂತ್ರಣಕ್ಕಾಗಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜಶೇಖರ್ ಪಾಟೀಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ನಿಯಂತ್ರಣಕ್ಕಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗಾಗಿ ಹಾಗೂ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕಾಗಿ ಅಂತರ್ ಇಲಾಖಾ ಸಮನ್ವಯದೊಂದಿಗೆ ನಿರಂತರವಾಗಿ ಚಟುವಟಿಕೆಗಳು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜನ ಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳಾದ ಜನವಾಡಾ ರಸ್ತೆ ಮೂಲಕ ಸಾಗಿ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು. ನಂತರ ಜಾಥವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಆವರಣದಲ್ಲಿ ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ರಾಜಶೇಖರ್ ಪಾಟೀಲ್, ಜಿಲ್ಲಾ ಮಟ್ಟದ ಆರೋಗ್ಯ ಕಾರ್ಯಕ್ರಮ ಅನುಷ್ಠಾಣಾಧಿಕಾರಿ ಡಾ.ಅನೀಲ್ ಚಿಂತಾಮಣಿ, ಡಾ.ಶಿವಶಂಕರ್, ಡಾ.ದಿಲೀಪ್ ಡೋಂಗ್ರೆ, ಸಂಗಪ್ಪಾ ಕಾಂಬ್ಳೆ, ಅನೀತಾ, ಓಂಕಾರ್ ಮಲ್ಲಿಗೆ, ಜೇತುಲಾಲ್ ಪವಾರ್, ಮಹ್ಮದ ಅಬುಬಕರ್ ಮಹಮ್ಮದ್ ಅಬ್ದುಲ್ ರಫೀ, ಕಾಶಿನಾಥ್, ಎಂಡಿ ಸಮಿಯುದ್ದಿನ್, ಸತೀಶ್ ಪಾಂಡೆ, ವೀರಶಟ್ಟಿ ಚೆನಶಟ್ಟಿ, ಮಹಮ್ಮದ್ ಸಮಿಯೋದ್ದಿನ್, ಶಿವರಾಜ್ ಸಾಗರ್, ಹಾದಿ ತಬ್ರೇಜ್, ದೇವಿದಾಸ್ ಗಂಗೆನೋರ್, ಸೋನಾಬಾಯಿ, ಬಸವರಾಜ್, ಅನೀಲ್ ಜಾಧವ್, ಮಹೆಬುಬ್ ಹಾಗೂ ಜಾವೇದ್ ಕಲ್ಯಾಣಕರ್ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.







