ಬೀದರ್ : ಸಾಹಿತಿ ಡಾ. ಎಂ.ಜಿ. ದೇಶಪಾಂಡೆಗೆ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ

ಬೀದರ್ : ಜಿಲ್ಲೆಯ ಖ್ಯಾತ ಸಾಹಿತಿ ಹಾಗೂ ಸಂಘಟಕ ಡಾ. ಎಂ.ಜಿ. ದೇಶಪಾಂಡೆ ಅವರಿಗೆ ಅವರ ಜೀವಮಾನ ಸಾಹಿತ್ಯ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರವಾದ ಡಾ. ಕೈಯಾರ ಕಿಞ್ಞಣ್ಣರೈ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.
ಕುವೆಂಪು ವಿಶ್ವವಿದ್ಯಾಲಯದ ಶಂಕರಘಟ್ಟ (ಶಿವಮೊಗ್ಗ)ದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ಇವರ ವತಿಯಿಂದ ಅಖಿಲ ಕರ್ನಾಟಕ ಕವಿ-ಕಾವ್ಯ ಸಮ್ಮೇಳನವನ್ನು ರವಿವಾರ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಡಾ. ಎಂ.ಜಿ. ದೇಶಪಾಂಡೆ ಅವರಿಗೆ ಗೌರವಾನ್ವಿತ ರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮ್ಮೇಳನವನ್ನು ಖ್ಯಾತ ಸಾಹಿತಿ ಡಾ. ಶರತ್ ಅನಂತಮೂರ್ತಿ ಅವರು ಉದ್ಘಾಟಿಸಿದರು. ಕುವೆಂಪು ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಪತಿ, ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ. ರಂಜಾನ್ ದರ್ಗಾ, ಸರ್ವಾಧ್ಯಕ್ಷ ಡಾ. ರಾಜೇಂದ್ರ ಚೆನ್ನಿ, ನಿಕಟ ಪೂರ್ವ ಅಧ್ಯಕ್ಷ ಡಾ. ಜಾಜಿ ದೇವೇಂದ್ರಪ್ಪ, ಕೃತಿ ಲೋಕಾರ್ಪಣೆ ಮಾಡಿದ ನಾಗರಾಜ್ ಹೆತ್ತೂರು, ಜಿಲ್ಲಾಧ್ಯಕ್ಷ ಡಾ. ಹಸೀನಾ ಎಚ್.ಕೆ., ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಡಾ. ದೇಶಪಾಂಡೆ ಅವರ ಈ ಗೌರವವು ಬೀದರ್ ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಾಹಿತ್ಯಾಸಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೀದರ್ ಜಿಲ್ಲೆಯ ಸಾಹಿತ್ಯ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.







