ಬೀದರ್ : ರಾಷ್ಟ್ರೀಯ ಪಲ್ಸ್ ಪೋಲಿಯೊ ಜಾಥಾಕ್ಕೆ ಚಾಲನೆ

ಬೀದರ್ : ಪೋಲಿಯೋ ಲಸಿಕೆ ವಾಹನ ಜಾಥಾ ಕಾರ್ಯಕ್ರಮದ ರ‍್ಯಾಲಿಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅವರಣದಲ್ಲಿ ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಉಪ ನಿರ್ದೇಶಕಿ ಡಾ. ಇಂದುಮತಿ ಪಾಟೀಲ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವು ಜೂ.28 ರಂದು ಬೂತ್‌ಗಳ ಮೂಲಕ ಲಸಿಕೆ ನೀಡಲಾಗುವುದು. ಜೂ.29 ರಿಂದ ಜು.1ರ ವರೆಗೆ ಮನೆಗಳಿಗೆ ಭೇಟಿ ನೀಡಿ ಉಳಿದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು. ಆದ್ದರಿಂದ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ನೀಡುವಂತೆ ಅವರು ಹೇಳಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಶಿವಶಂಕರ್.ಬಿ ಅವರು ಮಾತನಾಡಿ, 5 ವರ್ಷದೊಳಗಿನ ಒಟ್ಟು 2,13,213 ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 996 ಬೂತ್‌ಗಳು ನಿರ್ಮಿಸಲಾಗಿದೆ. ಅದರಂತೆ 2,154 ಲಸಿಕೆದಾರರನ್ನು ಹಾಗೂ 216 ಜನರನ್ನು ಬೂತ್ ಮೇಲ್ವಿಚಾರಣೆಗಾಗಿ ಸಿಬ್ಬಂದಿಯವರನ್ನು ನೇಮಿಸಲಾಗಿದ್ದು, 11 ಮೋಬೈಲ್ ತಂಡಗಳು ಹಾಗೂ 70 ಟ್ರಾನ್ಸಿಟ್ ಪಾಯಿಂಟ್ಸ್‌ಗಳ ಮೂಲಕ ಪ್ರತಿಶತ ಲಸಿಕಾಕರಣ ಗುರಿ ಸಾಧಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಾಜಶೇಖರ್ ಪಾಟೀಲ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅನೀಲ್ ಚಿಂತಾಮಣಿ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಕಿರಣ್ ಪಾಟೀಲ್, ತಾಲೂಕಾ ಅಧಿಕಾರಿ ಡಾ. ಸಂಗಾರೆಡ್ಡಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಾವಿತ್ರಿಬಾಯಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್ ಇಜಾರೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಓಂಕಾರ್ ಮಲ್ಲಿಗೆ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ್ ಬಿರಾದಾರ್, ಡಿಪಿಸಿ ಕಂ ಕ್ಲಸ್ಟರ್ ಪ್ರಿವೆನ್ಸನ್ ಅಧಿಕಾರಿ ಶಿವಶಂಕರ್ ಬೆಮಳಗಿ ಹಾಗೂ ಲಸಿಕಾ ಮೇಲ್ವಿಚಾರಕ ಲೋಕೇಶ್ ಸಲಗರ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.






