Bidar | 55 ಗ್ಯಾಸ್ ಸಿಲಿಂಡರ್ ವಶ; ನಾಲ್ವರ ಬಂಧನ

ಬೀದರ್ : ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 9 ಕಳವು ಪ್ರಕರಣಗಳಲ್ಲಿ ವಿವಿಧ ಗ್ಯಾಸ್ ಕಂಪೆನಿಗಳಿಗೆ ಸೇರಿದ ಒಟ್ಟು 55 ಗ್ಯಾಸ್ ಸಿಲಿಂಡರ್ ಗಳನ್ನು ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದ್ದಾರೆ.
ನಗರದ ಎಸ್ಪಿ ಕಚೇರಿ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು, ಮೇಹಕರ್ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು ಹಾಗೂ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ 2 ಪ್ರಕರಣಗಳಲ್ಲಿ ಒಟ್ಟು 2 ಲಕ್ಷ 75 ಸಾವಿರ ರೂ. ಮೌಲ್ಯದ 55 ಗ್ಯಾಸ್ ಸಿಲಿಂಡರ್ ಗಳು ಹಾಗೂ 7 ಲಕ್ಷ ರೂ. ಮೌಲ್ಯದ ಕೃತ್ಯಕ್ಕೆ ಬಳಸಿದ ಒಂದು ಕಾರು ಸೇರಿದಂತೆ ಒಟ್ಟು 9.75 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ ಎಂದರು.
ಮಹಾರಾಷ್ಟ್ರದ ಉದಗೀರ್ ಕಡೆಯಿಂದ ಕಾರೊಂದರಲ್ಲಿ ಕಳವು ಮಾಡಿರುವ ಸಿಲಿಂಡರ್ ಗಳು ಮಾರಾಟ ಮಾಡುವ ಉದ್ದೇಶದಿಂದ ಕೊಂಡೊಯ್ಯಲಾಗುತ್ತಿದೆ ಎಂಬ ಖಚಿತ ಮಾಹಿತಿ ಭಾಲ್ಕಿ ಗ್ರಾಮೀಣ ಠಾಣೆಯ ಪೊಲೀಸರಿಗೆ ಬಂದಿತ್ತು. ಇದರ ಆಧಾರದಲ್ಲಿ ಉದಗೀರ್ ರಸ್ತೆಯ ಬೀರಿ(ಬಿ) ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ಆರೋಪಿಗಳನ್ನು ವಿಚಾರಿಸಿದಾಗ ಅವರು ಭಾಲ್ಕಿ ತಾಲೂಕಿನ 27 ಹಳ್ಳಿಗಳಲ್ಲಿ, ಹುಮ್ನಾಬಾದ್ ತಾಲೂಕಿನ 8 ಹಳ್ಳಿಗಳಲ್ಲಿ ಮತ್ತು ಬಸವಕಲ್ಯಾಣ ತಾಲೂಕಿನ 1 ಹಳ್ಳಿಯಲ್ಲಿ ವಿವಿಧ ಶಾಲೆಯಲ್ಲಿ ರಾತ್ರಿ ಅಡುಗೆ ಕೋಣೆಯ ಕೀಲಿ ಮುರಿದು ಗ್ಯಾಸ್ ಸಿಲಿಂಡರ್ ಗಳನ್ನು ಕಳವು ಮಾಡಿರುವ ಬಗ್ಗೆ ಹೇಳಿದ್ದರು. ಕಳವು ಮಾಡಿರುವ ಸಿಲಿಂಡರ್ ಗಳು ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ ಹತ್ತಿರ ಇರುವ ಒಂದು ಚಹಾ ಹೋಟಲ್ ನಲ್ಲಿ ಇಟ್ಟಿರುವ ಬಗ್ಗೆ ತಿಳಿಸಿದ್ದರು. ಅಲ್ಲಿಗೆ ಹೋಗಿ ನೋಡಿದಾಗ ಆ ಹೋಟಲ್ ನಲ್ಲಿದ್ದ ಒಟ್ಟು 55 ಸಿಲಿಂಡರ್ಗಳು ಜಪ್ತಿ ಮಾಡಲಾಗಿದೆ. ಬಂಧಿಸಿದ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.






