Bidar | ಸಿಕಿಂದ್ರಾಪೂರ್ ಬೌದ್ಧ ವಿಹಾರದಲ್ಲಿ ಮಕ್ಕಳಿಗೆ ನೋಟುಬುಕ್, ಪೆನ್ ವಿತರಣೆ

ಬೀದರ್: ಆಣದೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಕಿಂದ್ರಾಪೂರ್ ಗ್ರಾಮದ ಬೌದ್ಧ ವಿಹಾರದಲ್ಲಿ ನಡೆಯುತ್ತಿರುವ ವರ್ಷವಾಸ ಕಾರ್ಯಕ್ರಮದ ಅಂಗವಾಗಿ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಸಂಘಟನೆ ವತಿಯಿಂದ ಬುಧವಾರ ಮಕ್ಕಳಿಗೆ ನೋಟುಬುಕ್ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿಯ ಸಂಸ್ಥಾಪಕ ಅಧ್ಯಕ್ಷ ದಿಲೀಪಕುಮಾರ್ ವರ್ಮಾ, ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡಿದ್ದು, “ಶಿಕ್ಷಣವು ಹುಲಿಯ ಹಾಲಿನಂತದ್ದು; ಅದನ್ನು ಕುಡಿದವರು ಘರ್ಜಿಸಲೇಬೇಕು” ಎಂದು ಹೇಳುವ ಮೂಲಕ ಅದರ ಮಹತ್ವವನ್ನು ಸಾರಿದ್ದಾರೆ ಎಂದು ಹೇಳಿದರು.
ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಸಾಧನವಾಗಿದ್ದು, ಪ್ರತಿಯೊಬ್ಬ ಮಗು ಉತ್ತಮ ಶಿಕ್ಷಣ ಪಡೆಯಬೇಕು. ಈ ಉದ್ದೇಶದಿಂದ ಸಂಘಟನೆ ಬಡವರು, ದಲಿತರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕ ಕುಟುಂಬಗಳ ಮಕ್ಕಳಿಗೆ ವಿವಿಧ ಸಂದರ್ಭಗಳಲ್ಲಿ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಎರಡು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಗುಣಮಟ್ಟದ ಕಂಪಾಸ್ ಬಾಕ್ಸ್, ಪರೀಕ್ಷಾ ಪ್ಯಾಡ್, ನೋಟುಬುಕ್, ಪೆನ್ನು, ಕಲರ್ ಪೆನ್ಸಿಲ್ ಹಾಗೂ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಅಗತ್ಯವಾಗಿದ್ದು, ಬಡವರು ಹಾಗೂ ಶ್ರೀಮಂತರ ನಡುವೆ ಭೇದವಿಲ್ಲದ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಬಾಬಾ ಸಾಹೇಬರ ಕನಸನ್ನು ನನಸು ಮಾಡಲು ಮಕ್ಕಳು ಉನ್ನತ ಶಿಕ್ಷಣ ಪಡೆದು ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ತಾಲೂಕು ಉಪಾಧ್ಯಕ್ಷ ಭೀಮರಾವ್ ಖಂದಾರೆ, ಗ್ರಾಮದ ಹಿರಿಯ ಮುಖಂಡರಾದ ಈಶ್ವರ್ ಸೋನಿ, ಓಂಕಾರ್ ಖಂಡಾರೆ, ಬಾಬು ಮರಖಲೆ, ಸರಸ್ವತಿ ಸಾಗರ್, ಸುಜಾತಾ ವರ್ಮಾ, ನಿರ್ಮಲಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






