ಬೀದರ್ | ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಒಂದು ದಿನದ ಪ್ರತಿಭಟನಾ ಧರಣಿ

ಬೀದರ್ : ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯ, ಸಮಾಜೀಕ ಅರಣ್ಯೀಕರಣ ಹಾಗೂ ಗೊವುಗಳ ಗೋ ಮಾಳಗಳಿಗೆ ಕಾಯ್ದಿರಿಸುವ ನೆಪದಲ್ಲಿ ಒಕ್ಕಲೆಬ್ಬಿಸುವುದನ್ನು ಖಂಡಿಸುತ್ತಾ, ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯು ಒಂದು ದಿನದ ಪ್ರತಿಭಟನಾ ಧರಣಿ ನಡೆಸಿತು.
ಇಂದು ಬೀದರ್ ನ ತಹಶೀಲ್ದಾರ್ ಕಚೇರಿ ಮುಂದೆ ಮುಂಜಾನೆ 11 ಗಂಟೆಯಿಂದ ಸಾಯಂಕಾಲದ ಸುಮಾರು 4 ಗಂಟೆವರೆಗೆ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಬೀದರ್ ನ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬೀದರ್ ತಾಲೂಕಿನ ಅಲಿಯಬಾದ್ ಗ್ರಾಮದ ಸರ್ವೆ ನಂ.37, 38, 40 ರಲ್ಲಿ ದಲಿತ ಕುಟುಂಬಕ್ಕೆ ಸೇರಿದ ಭೂಮಿಯನ್ನು ನಕಲಿ ಪ್ರಮಾಣ ಪತ್ರ ಸಲ್ಲಿಸಿ ಮೇಲ್ವರ್ಗದವರೊಬ್ಬರ ಹೆಸರಿಗೆ ಪಹಣಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ಇದ್ದರೂ ಕೂಡ ಆ ದಲಿತ ಕುಟುಂಬಕ್ಕೆ ಕಿರಕುಳ ನೀಡುತ್ತಿದ್ದಾರೆ. ಹೀಗಾಗಿ ಆ ಮೇಲ್ವರ್ಗದ ಕುಟುಂಬದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಇತಂಹ ಸುಮಾರು ದಲಿತರ ಭೂಮಿಯನ್ನು ಅರಣ್ಯ ಇಲಾಖೆಯಿಂದ ಒತ್ತುವರಿ ಮಾಡಲಾಗಿದ್ದು, ಇದನ್ನು ಕೈ ಬಿಡಬೇಕು. ದಲಿತರು ಸುಮಾರ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳು ಶೀಘ್ರದಲ್ಲಿ ಪರಿಹರಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಗಿ, ಕಲಬುರಗಿ ವಿಭಾಗೀಯ ಸಂಘಟನಾ ಸಂಚಾಲಕ ರಾಜಕುಮಾರ್ ಬನ್ನೇರ್, ಜಿಲ್ಲಾ ಸಂಚಾಲಕ ರಮೇಶ್ ಮಂದಕನಳ್ಳಿ, ಝೆರೆಪ್ಪಾ ರಾಂಪೂರೆ, ಸುಭಾಷ್ ಜ್ಯೋತಿ, ಕೈಲಾಸ್ ಮೇಟಿ, ಸಂಜುಕುಮಾರ್ ಬ್ಯಾಗಿ, ಅಹಮ್ಮದ್ ಅಲಿಯಾಬಾದ್, ಖಾಜಾ ಮೈನೋದ್ದಿನ್, ಗೌತಮ್ ಸಾಗರ್, ಬಸವರಾಜ್ ಕಾಂಬಳೆ, ನಾಗೇಂದ್ರ ಜನವಾಡಾ, ಲಕ್ಷ್ಮಣ್ ಶೇರಿಕರ್, ಜಗದೇವಿ ಕೆ.ಭಂಡಾರಿ, ರಂಜೀತಾ ಜೈನೂರ್, ದೇವಸಿಲಾ ಸದಾಫುಲೆ, ರುಕ್ಮಿಣಿ ಕಾಂಬಳೆ, ಸುಧಾಕಾರ್ ಮಾಳಗೆ, ಸುವರ್ಣಾ ಪುಜಾರಿ ಇದ್ದರು. ಹಾಗೆಯೇ ಆರ್.ಪಿ.ಐ ಪಕ್ಷದ ರಾಜ್ಯಾಧಕ್ಷ ಮಹೇಶ ಗೋರನಾಳಕರ್, ಭೂಮಿಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಸಾಮಾಜೀಕ ಹೊರಾಟಗಾರ ಶಶಿ ಪೊಲೀಸ್ ಪಾಟೀಲ್, ಅಂಬಾದಾಸ್ ಗಾಯಕವಾಡ್, ಬೀರು ಸಿಂಗ್, ಗೌತಮ್ ಪ್ರಸಾದ್ ಇವರು ಈ ಹೋರಾಟಕ್ಕೆ ಬೆಂಬಲಿಸಿದ್ದಾರೆ.







