Bidar | ಕ್ಯಾನ್ಸರ್ ಚಿಕಿತ್ಸೆ ಕುರಿತು ಮುಕ್ತ ಚರ್ಚೆ ಅಗತ್ಯ : ಡಾ.ದೇವೇಶ್ ಬಲ್ಲಾಳ್

ಬೀದರ್: ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಭಯ ಮತ್ತು ತಪ್ಪು ಕಲ್ಪನೆಗಳನ್ನು ಬದಿಗೊತ್ತಿ ಆರಂಭಿಕ ತಪಾಸಣೆ ಹಾಗೂ ವೈಜ್ಞಾನಿಕ ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ಹಳೆ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ಸರ್ಜರಿ ವಿಭಾಗದ ಸಲಹೆಗಾರ ಡಾ. ದೇವೇಶ್ ಬಲ್ಲಾಳ್ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಳಂಕ ಮತ್ತು ಅಪ್ರಮಾಣಿತ ಪರ್ಯಾಯ ಚಿಕಿತ್ಸೆಗಳ ಮೇಲಿನ ನಂಬಿಕೆಯಿಂದ ಅನೇಕರು ವೈದ್ಯರನ್ನು ತಡವಾಗಿ ಸಂಪರ್ಕಿಸುತ್ತಿದ್ದಾರೆ. ಈ ವಿಳಂಬವೇ ರೋಗ ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಧುನಿಕ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದ ಜೀವ ಉಳಿಸುವುದರ ಜೊತೆಗೆ ದೇಹದ ಅಂಗಾಂಗಗಳನ್ನು ಸಂರಕ್ಷಿಸುವುದು ಹಾಗೂ ಶಸ್ತ್ರಚಿಕಿತ್ಸೆಯ ಬಳಿಕದ ತೊಂದರೆಗಳನ್ನು ಕಡಿಮೆ ಮಾಡುವತ್ತ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ರೋಗಿಗಳು ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಇಂದಿನ ಕ್ಯಾನ್ಸರ್ ಚಿಕಿತ್ಸೆಯನ್ನು ಪ್ರತಿಯೊಬ್ಬ ರೋಗಿಯ ಗಡ್ಡೆಯ (ಟ್ಯೂಮರ್) ಜೈವಿಕ ಸ್ವರೂಪಕ್ಕೆ ಅನುಗುಣವಾಗಿ ರೂಪಿಸಲಾಗುತ್ತಿದ್ದು, ಪರಿಣಿತ ವೈದ್ಯರ ತಂಡದ ಸಮನ್ವಯದಿಂದ ಉತ್ತಮ ಫಲಿತಾಂಶ ದೊರೆಯುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ವರದಿಯಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು ಶೇ.25ರಷ್ಟು ಪ್ರಕರಣಗಳಿಗೆ ತಂಬಾಕು ಸೇವನೆಯೇ ಕಾರಣವಾಗಿದ್ದು, ಅಂದಾಜು 22 ಸಾವಿರ ಪ್ರಕರಣಗಳು ನೇರವಾಗಿ ತಂಬಾಕು ಬಳಕೆಗೆ ಸಂಬಂಧಿಸಿವೆ ಎಂದು ಅವರು ತಿಳಿಸಿದರು.
ಕ್ಯಾನ್ಸರ್ ತಪಾಸಣೆಯ ವ್ಯಾಪ್ತಿಯನ್ನು ವಿಸ್ತರಿಸುವುದು, ತಂಬಾಕು ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಬಲಪಡಿಸುವುದು ಹಾಗೂ ವಿಶೇಷವಾಗಿ ಮಹಿಳೆಯರು ಮತ್ತು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಸಮಾಜ, ಸರ್ಕಾರ ಮತ್ತು ವೈದ್ಯಕೀಯ ವಲಯ ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಹೋರಾಟ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.






