Bidar | ಹಳ್ಳಿಗಳಿಂದಲೇ ನಮ್ಮ ಸಂಸ್ಕೃತಿ ಶ್ರೀಮಂತವಾಗಿದೆ : ಖಾಜಾ ಕಲಿಂ ಉಲ್ಲಾ

ಬೀದರ್ : ನಮ್ಮ ದೇಶ ಹಳ್ಳಿಗಳನ್ನು ಹೊಂದಿರುವ ನಾಡಾಗಿದ್ದು, ನಮ್ಮ ಸಂಸ್ಕೃತಿ ಶ್ರೀಮಂತವಾಗಲು ಹಳ್ಳಿಗಳೇ ಕಾರಣವಾಗಿವೆ ಎಂದು ನ್ಯಾಯವಾದಿ ಖಾಜಾ ಕಲಿಂ ಉಲ್ಲಾ ಹೇಳಿದರು.
ನಗರದ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕರ್ನಾಟಕ ಪಂಚಶೀಲ ಸಾಹಿತ್ಯ ಕಲಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಸಂಗೀತೋತ್ಸವ, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕಲಾವಿದರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗುತ್ತಿರುವುದರಿಂದ ಸಂಸ್ಕೃತಿಯ ನಾಶವಾಗುತ್ತಿದೆ. ಸಂಬಂಧಗಳು ದೂರವಾಗುತ್ತಿವೆ. ಪ್ರಾಣಿ–ಪಕ್ಷಿಗಳನ್ನು ನೋಡಲು ಝೂಗಳಿಗೆ ಹೋಗುವಂತೆಯೇ, ಮುಂದೊಂದು ದಿನ ಅಜ್ಜ–ಅಜ್ಜಿಯನ್ನು ನೋಡಲು ಹಳ್ಳಿಗಳಿಗೆ ಹೋಗುವ ಪರಿಸ್ಥಿತಿ ಬರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜುಕುಮಾರ್ ಅತಿವಾಳೆ ಮಾತನಾಡಿ, ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಘ–ಸಂಸ್ಥೆಗಳಿಗೆ ಧನಸಹಾಯ ನೀಡುವ ಮೂಲಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ ಎಂದರು.
ನ್ಯಾಯವಾದಿ ಬಿ. ಕೃಷ್ಣಪ್ಪ ಮಾತನಾಡಿ, ಸಂಘ–ಸಂಸ್ಥೆಗಳ ಮೂಲಕ ಜಾನಪದ, ಕಲೆ ಹಾಗೂ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭಂತೆ ಧಮ್ಮಕಿರ್ತಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕ ರಾಜಕುಮಾರ್ ಅಲ್ಲೂರೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಬಿಎಸ್ಐ ಜಿಲ್ಲಾಧ್ಯಕ್ಷ ರಾಜಪ್ಪಾ ಗೂನ್ನಳ್ಳಿಕರ್, ಆರ್ ಪಿ ಐ (ಅಂಬೇಡ್ಕರ್) ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಹಾಗೂ ರೇಖಾ ಕಾಂಚೆ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸೂರ್ಯಕಾಂತ್ ಬಡಿಗೇರ್ ಸ್ವಾಗತಿಸಿದರು. ಅಂಬಾದಾಸ್ ಗಾಯಕವಾಡ್ ನಿರೂಪಿಸಿದರು. ಅರ್ಜುನ್ ಕಾಂಚೆ ವಂದಿಸಿದರು.






