ಬೀದರ್ | ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ನಮ್ಮ ಹೋರಾಟ ಅಚಲವಾಗಿದೆ : ಮಹಫೋಝ್ ರಹ್ಮಾನಿ

ಬೀದರ್ : ಧಾರ್ಮಿಕ ಹಕ್ಕು ಕಬಳಿಸುವ ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ನಮ್ಮ ಹೋರಾಟ ಅಚಲವಾಗಿದೆ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎ.ಐ.ಎಮ್.ಪಿ.ಎಲ್.ಬಿ) ಕಾರ್ಯದರ್ಶಿ ಮೌಲಾನಾ ಉಮರೇನ್ ಮಹಫೋಝ್ ರಹ್ಮಾನಿ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸ ವಕ್ಫ್ ಕಾಯ್ದೆ ಮೂಲಕ ಮುಸ್ಲಿಂರ ಧಾರ್ಮಿಕ ಹಕ್ಕು ಕಬಳಿಸುವ ಹುನ್ನಾರ ನಡೆಸಲಾಗುತ್ತಿದೆ. ವಕ್ಫ್ ಕಾಯ್ದೆಗೆ ತಂದಿರುವ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು, ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಹಾಗೆಯೇ ಇದು ವಕ್ಫ್ ಆಸ್ತಿಗಳನ್ನು ಕಬಳಿಸುವ ಮತ್ತು ನಾಶಮಾಡುವ ಪಿತೂರಿಯ ಭಾಗವಾಗಿದೆ ಎಂದು ಆರೋಪಿಸಿದರು.
ತನ್ನ ಸಂಖ್ಯಾ ಬಲವನ್ನು ಬಳಸಿಕೊಂಡು, ಆಡಳಿತ ಪಕ್ಷವು ದೇಶದ ಲಕ್ಷಾಂತರ ಮುಸ್ಲಿಂ, ಅಲ್ಪಸಂಖ್ಯಾತ ಮತ್ತು ನ್ಯಾಯವನ್ನು ಪ್ರೀತಿಸುವ ನಾಗರಿಕರ ಇಚ್ಛೆಗೆ ವಿರುದ್ಧವಾಗಿ ವಕ್ಫ್ ಕಾಯ್ದೆಗೆ ಅನಿಯಂತ್ರಿತ, ತಾರತಮ್ಯದ ತಿದ್ದುಪಡಿಗಳನ್ನು ಅಂಗೀಕರಿಸಿದೆ. ನಾವು ಈ ತಿದ್ದುಪಡಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ ಎಂದರು.
ಈ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದೇವೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಈ ನಿಟ್ಟಿನಲ್ಲಿ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೂರು ತಿಂಗಳ ಶಾಂತಿಯುತ ಅಭಿಯಾನವನ್ನು ರೂಪಿಸಿದೆ. ಇದನ್ನು ಪೂರ್ಣಶಕ್ತಿ ಮತ್ತು ಪ್ರಾಮಾಣಿಕತೆಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು. ನಮ್ಮ ರಾಜ್ಯ ಸಮಿತಿಯು ರಾಜ್ಯವ್ಯಾಪಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ಮತ್ತು ಧಾರ್ಮಿಕ ಸಮುದಾಯಗಳು, ಪ್ರಮುಖ ಧಾರ್ಮಿಕ ಮತ್ತು ರಾಜಕೀಯ ನಾಯಕರು ಮತ್ತು ನಾಗರಿಕ ಸಮಾಜದ ಪ್ರಮುಖ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮವು ಶಾಂತಿಯುತವಾಗಿ ಮತ್ತು ಸಂವಿಧಾನ ಮತ್ತು ಕಾನೂನಿನ ಮಿತಿಯೊಳಗೆ ಇರುತ್ತದೆ ಎಂದು ಮಾಹಿತಿ ನೀಡಿದರು.
ಜುಲೈವರೆಗೆ ಮೇಲಿನ ಈ ಎಲ್ಲ ಹೋರಾಟಗಳು ನಡೆಯಲಿದ್ದು, ಸರ್ಕಾರ ಈ ಕಾನೂನು ಹಿಂಪಡೆಯದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಕರ್ನಾಟಕದ ಅಧ್ಯಕ್ಷ ಸುಲೇಮಾನ್ ಖಾನ್, ಶಾಹಿನ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅಡಳಿತ ಮಂಡಳಿಯ ಸದಸ್ಯ ಡಾ.ಅಬ್ದುಲ್ ಖದೀರ್ ಸೇರಿದಂತೆ ಇತರರು ಭಾಗವಹಿಸಿದ್ದರು.







