Bidar | ಅಮಲಾಪುರ ದಲಿತರಿಗೆ ಸ್ಮಶಾನಭೂಮಿ ನೀಡುವಂತೆ ಆಗ್ರಹಿಸಿ ಪಾದಯಾತ್ರೆ; ಡಿಸಿ ಕಚೇರಿಗೆ ಮುತ್ತಿಗೆ

ಬೀದರ್: ಅಮಲಾಪುರ ಗ್ರಾಮದ ದಲಿತ ಸಮುದಾಯಕ್ಕೆ ಸ್ಮಶಾನಭೂಮಿ ಮಂಜೂರು ಮಾಡಿ ಪಹಣಿ ಪತ್ರಿಕೆ ನೀಡಬೇಕು ಎಂದು ಆಗ್ರಹಿಸಿ ಅಮಲಾಪುರ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಅಮಲಾಪುರ ಗ್ರಾಮದಿಂದ ಸುಮಾರು 8 ರಿಂದ 10 ಕಿಲೋಮೀಟರ್ ಪಾದಯಾತ್ರೆ ನಡೆಸಿದ ಹೋರಾಟಗಾರರು ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಬ್ಯಾರಿಕೇಡ್ ತಳ್ಳುವ ಮೂಲಕ ಒಳಗೆ ಪ್ರವೇಶಿಸಲು ಯತ್ನಿಸಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ, ಸ್ಮಶಾನಭೂಮಿ ಮಂಜೂರಾತಿಗಾಗಿ ಕಳೆದ 20 ದಿನಗಳಿಂದ ಬೀದರ್ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ ಎಂಟು ದಿನಗಳಲ್ಲಿ ಸ್ಮಶಾನಭೂಮಿ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ದಲಿತ ಮುಖಂಡ ರಾಹುಲ್ ಖಂದಾರೆ ಮಾತನಾಡಿ, ಅಮಲಾಪುರ ಗ್ರಾಮದಲ್ಲಿ ದಲಿತ ಸಮುದಾಯದವರು ಮೃತಪಟ್ಟರೆ ಅಂತ್ಯಸಂಸ್ಕಾರ ನಡೆಸಲು ಸ್ಮಶಾನಭೂಮಿ ಇಲ್ಲದಿರುವುದು ಅತ್ಯಂತ ದುಃಖಕರ ಸಂಗತಿ. ಸ್ಮಶಾನಭೂಮಿ ಮಂಜೂರು ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನೋರ್ವ ಮುಖಂಡ ವಿನೋದ್ ರತ್ನಾಕರ್ ಮಾತನಾಡಿ, ಸ್ಮಶಾನಭೂಮಿಗೆ ಪಹಣಿ ಪತ್ರಿಕೆ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರೊಂದಿಗೆ ಪ್ರತಿಭಟನಾಕಾರರ ನಡುವೆ ಈ ವಿಷಯವಾಗಿ ಕೆಲಕಾಲ ವಾದ-ಪ್ರತಿವಾದ ನಡೆಯಿತು. ಜಿಲ್ಲಾಧಿಕಾರಿಗಳು 20 ದಿನಗಳಲ್ಲಿ ಸ್ಮಶಾನಭೂಮಿಯ ಪಹಣಿ ಪತ್ರಿಕೆ ನೀಡಲಾಗುವುದು ಎಂದು ಮೌಖಿಕ ಭರವಸೆ ನೀಡಿದರೂ ಪ್ರತಿಭಟನಾಕಾರರು ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದರು.
ಕೊನೆಗೆ ಸ್ಮಶಾನಭೂಮಿಗೆ ಇಂದಿನಿಂದಲೇ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಅಮಲಾಪುರ ಗ್ರಾಮದ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.






