ಬೀದರ್ | ರೈತರ ಕಬ್ಬಿನ ಬಾಕಿ ಬಿಲ್ಲು ಪಾವತಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಶಿಲ್ಪಾ ಶರ್ಮಾ
ಬೀದರ್ : ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 2024-25ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರ ಕಬ್ಬಿನ ಬಾಕಿ ಉಳಿದ ಬಿಲ್ಲು 20,98,00,000 ರೂ.ಗಳನ್ನು ರೈತರಿಗೆ ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಇಮಾಪೂರ ಕಾರ್ಖಾನೆಗೆ 2024-25ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರ ಕಬ್ಬಿನ ಬಿಲ್ಲು ಪಾವತಿಸದೇ ಇರುವುದರಿಂದ ಭೂಕಂದಾಯದಡಿ ವಸೂಲಿ ಪ್ರಮಾಣ ಪತ್ರವನ್ನು ಹೊರಡಿಸಲಾಗಿರುತ್ತದೆ. ಅದರಂತೆ ಬೀದರ್ ತಹಶೀಲ್ದಾರರು ಕಾರ್ಖಾನೆಯಲ್ಲಿರುವ 65,000 ಕ್ವಿಂಟಲ್ ಸಕ್ಕರೆಯನ್ನು ಜಪ್ತಿ ಮಾಡಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯವರು ಮನವಿ ನೀಡಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಬಿಲ್ಲು ಪಾವತಿಸಲು ಒತ್ತಾಯಿಸಿದ್ದರು. ಇದರಿಂದಾಗಿ ಸಕ್ಕರೆ ಕಾರ್ಖಾನೆಯಲ್ಲಿ ಜಪ್ತಿ ಮಾಡಿರುವ 65,000 ಕ್ವಿಂಟಲ್ ಸಕ್ಕರೆಯನ್ನು ಮಾರಾಟ ಮಾಡಿ ರೈತರ ಕಬ್ಬಿನ ಸಂಪೂರ್ಣ ಬಿಲ್ಲು ಪಾವತಿ ಮಾಡಲು ಬೆಂಗಳೂರಿನ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕ ಆಯುಕ್ತರ ಅನುಮತಿ ಪಡೆದು ಕಾರ್ಖಾನೆಯಲ್ಲಿರುವ 65,000 ಕ್ವಿಂಟಲ್ ಸಕ್ಕರೆ ಮಾರಾಟ ಮಾಡಿ ರೈತರ ಬಾಕಿ ಇರುವ ಮೊತ್ತ ಪಾವತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.







