ಬೀದರ್ | ಜನ ತಂತ್ರಜ್ಞಾನದತ್ತ ಆಕರ್ಷಿತರಾಗುತ್ತಿದ್ದು, ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿದೆ : ಡಾ.ವಿಷ್ಣು ಸಿಂಧೆ

ಬೀದರ್ : ಬದಲಾದ ಕಾಲ ಘಟ್ಟದಲ್ಲಿ ಜನ ತಂತ್ರಜ್ಞಾನದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ವಿಷ್ಣು ಎಂ.ಸಿಂಧೆ ಅವರು ಅಭಿಪ್ರಾಯಪಟ್ಟರು.
ಇಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ಆಣದೂರು ಗ್ರಾಮದ ಮಾಣಿಕಪ್ರಭು ದೇವಸ್ಥಾನದಲ್ಲಿ ಆಯೋಜಿಸಿದ್ದ ʼಬೀದರ್ ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನʼ ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್‍ನಲ್ಲಿ ನೋಡುವುದು ಹಾಗೂ ಕೇಳುವುದನ್ನು ಜನ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಹೀಗಾಗಿ ಜನರ ಆಸಕ್ತಿಯ ಮಾರ್ಗದಲ್ಲೇ ಅವರಿಗೆ ಸಾಹಿತ್ಯ ನೀಡಬೇಕಾಗಿದೆ. ಆಧುನಿಕ ಜಗತ್ತಿನಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಸಾಹಿತ್ಯ ಪ್ರಸಾರಕ್ಕೆ ಆಡಿಯೋ ಕಥೆ, ವಾಟ್ಸಪ್ ಚುಟುಕು, ಇ-ಪುಸ್ತಕ, ವೆಬ್ ಪೇಜ್ ಹಾಗೂ ಯುಟ್ಯೂಬ್ ನಂಥ ಮಾರ್ಗಗಳನ್ನು ಬಳಸಿಕೊಳ್ಳಬೇಕಿದೆ. ಕೃತಿಗಳ ಮಾರಾಟಕ್ಕಾಗಿ ಪುಸ್ತಕ ಸಂತೆಗಳನ್ನು ಹಮ್ಮಿಕೊಳ್ಳಬೇಕಿದೆ. ಕನ್ನಡಕ್ಕಾಗಿ ಕೆಲಸ ಮಾಡುವವರು ಹಾಗೂ ಬರಹಗಾರರನ್ನು ಪ್ರೋತ್ಸಾಹಿಸಬೇಕಿದೆ. ಪ್ರಸ್ತುತ ಅವಕಾಶಗಳಿಗಾಗಿ ಬಹು ಭಾಷೆಗಳನ್ನು ಕಲಿಯಬೇಕಾಗಿದೆ. ಕನ್ನಡವನ್ನು ಬುನಾದಿಯಾಗಿ ಇಟ್ಟುಕೊಂಡೇ ಹೊಸ ಭಾಷೆ ಜ್ಞಾನ ಪಡೆಯಬೇಕಾಗಿದೆ ಎಂದು ತಿಳಿಸಿದರು.
ಸಮ್ಮೇಳನ ಸರ್ವಾಧ್ಯಕ್ಷ ಪಂಡಿತ್ ಬಸವರಾಜ್ ಮಾತನಾಡಿ, ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೆ ಶೇ.60 ರಷ್ಟು ಭಾಗದಲ್ಲಿ ಕನ್ನಡ ನಾಮ ಫಲಕ ಅಳವಡಿಕೆಗೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಸಂಪೂರ್ಣ ಅನುಷ್ಠಾನ ಆಗಬೇಕು. ಪರಿಷತ್ ಪದಾಧಿಕಾರಿ, ಕನ್ನಡ ಅಭಿಮಾನಿಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ಎಲ್ಲರಿಗೂ ದೇಶ ಮೊದಲು ಆಗಬೇಕು. ಸ್ವಾರ್ಥಕ್ಕಾಗಿ ಪ್ರಾದೇಶಿಕತೆ, ಭಾಷೆ ಹೆಸರಲ್ಲಿ ದ್ವೇಷ ಹರಡುವ ಕೆಲಸ ಯಾರೂ ಕೂಡ ಮಾಡಬಾರದು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕಾರ್ಯ ಕ್ರಿಯಾಶೀಲವಾಗಿ ಮಾಡುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಜಿಲ್ಲೆಯ ಕನ್ನಡ ಶಾಲೆಯಲ್ಲಿ ಒಂದೇ ಒಂದು ಮಗು ಇದ್ದರೂ ಕನ್ನಡ ಶಾಲೆ ಮುಚ್ಚಲು ಬಿಡುವುದಿಲ್ಲ ಎನ್ನುವ ಎಚ್ಚರಿಕೆ ನೀಡಿದ ಅವರು, ಕನ್ನಡ ಭಾಷೆ ನಮ್ಮ ತಾಯಿ ಭಾಷೆಯಾಗಿದೆ. ಅದನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಓಂಪ್ರಕಾಶ್ ದಡ್ಡೆ, ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಆಣದೂರು ವೈಶಾಲಿ ನಗರದ ಭಂತೆ ಧಮ್ಮಾನಂದ್ ಮಹಾಥೆರೋ, ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ನ ಜಿಲ್ಲಾ ಮೇಲ್ವಿಚಾರಕ ನೆಲ್ಸನ್ ಸುಮಿತ್ರಾ, ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಗುಮ್ತಾಪುರೆ, ಉಪಾಧ್ಯಕ್ಷೆ ಶ್ರೀದೇವಿ ಅಂಬಾದಾಸ್ ಸೋನಿ, ಕನ್ನಡ ಪರಿಷತ್ ಬೀದರ್ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ವೀರಶೆಟ್ಟಿ ಚನಶೆಟ್ಟಿ, ಉಮೇಶ್ ಜಾಬಾ, ಖಜಾಂಚಿ ದೇವೇಂದ್ರ ಕರಂಜೆ, ಭದ್ರಪ್ಪ ಬಶೆಟ್ಟಿ, ಶಿವಪುತ್ರ ಡಾಕುಳಗಿ, ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಂ. ಮಚ್ಚೆ, ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಬಸವರಾಜ್ ಹಾಗೂ ಬೀದರ್ ದಕ್ಷಿಣ ಯುವ ಘಟಕದ ಅಧ್ಯಕ್ಷ ಸಿದ್ಧಾರೂಡ್ ಭಾಲ್ಕೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.







