Bidar | ಬಸವಕಲ್ಯಾಣಕ್ಕೆ ಆಗಮಿಸುತ್ತಿರುವ ಕನ್ಹೇರಿ ಸ್ವಾಮೀಜಿಯವರ ಪ್ರವೇಶಕ್ಕೆ ತಡೆ ಕೋರಿ ಮನವಿ

ಬೀದರ್: ಬಸವಕಲ್ಯಾಣದಲ್ಲಿ ಜೂ.28ರಂದು ನಡೆಯಲಿರುವ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನ್ಹೇರಿ ಸ್ವಾಮೀಜಿಯವರ ಬಸವಕಲ್ಯಾಣ ಪ್ರವೇಶವನ್ನು ತಡೆಯಬೇಕು ಎಂದು ಸೌಹಾರ್ದ ಕರ್ನಾಟಕ ವೇದಿಕೆ, ಡಿವೈಎಫ್‌ಐ, ಅಖಿಲ ಭಾರತ ಜನವಾದಿ ಮಹಿಳಾ ಸಂಘ ಹಾಗೂ ಎಸ್‌ಎಫ್‌ಐ ಸಂಘಟನೆಗಳು ಒತ್ತಾಯಿಸಿವೆ.
ಹುಮನಾಬಾದ್ ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಕನ್ಹೇರಿ ಸ್ವಾಮೀಜಿ ಬಸವ ಭಕ್ತರನ್ನು ಅವಮಾನಿಸುವ ರೀತಿಯ ಹೇಳಿಕೆಗಳನ್ನು ನೀಡಿದ್ದು, ಬಸವ ತತ್ವ ಹಾಗೂ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಿರುವ ಪೂಜ್ಯರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿರುವುದನ್ನು ತೀವ್ರವಾಗಿ ಖಂಡಿಸಲಾಗಿದೆ.
ಇಂತಹ ಹೇಳಿಕೆಗಳು ಬಸವಾನುಯಾಯಿಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದು, ಬಸವಾದಿ ಶರಣರ ಪವಿತ್ರ ನೆಲವಾದ ಬಸವಕಲ್ಯಾಣದ ಗೌರವ ಹಾಗೂ ಸಾರ್ವಜನಿಕ ಸೌಹಾರ್ದ ಕಾಪಾಡುವ ದೃಷ್ಟಿಯಿಂದ ಅವರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಸಂಘಟನೆಗಳು ಆಗ್ರಹಿಸಿವೆ.
ಒಂದು ವೇಳೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಬಸವ ಭಕ್ತರ ಭಾವನೆಗಳಿಗೆ ಧಕ್ಕೆಯಾಗುವ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿದ್ದು, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಡಿವೈಎಫ್‌ಐ ನ ಜಿಲ್ಲಾ ಸಂಚಾಲಕ ಶಶಿಕಾಂತ್ ಡಾಂಗೆ, ಸೌಹಾರ್ದ ಕರ್ನಾಟಕ ವೇದಿಕೆಯ ಪ್ರಭು ಸಂತೋಷ್‌ಕರ್, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ರೇಷ್ಮಾ ಹಂಸರಾಜ್, ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಸೈಯದ್ ಮೋರಾಜೋದ್ದೀನ್, ಅಂಬುಬಾಯಿ ಮಾಳಗೆ, ಇಸಾಮೋದ್ದೀನ್ ಹಾಗೂ ಗೌಸೋದ್ದೀನ್ ಸೇರಿದಂತೆ ಇತರರು ಇದ್ದರು.






