Bidar | ಎಸ್‌ಐಆರ್ ಹೆಸರಿನಲ್ಲಿ ಲಕ್ಷಾಂತರ ಮತದಾರರನ್ನು ಕೈಬಿಡುವ ಹುನ್ನಾರ: ಓಂಪ್ರಕಾಶ್ ರೊಟ್ಟೆ ಆರೋಪ

ಬೀದರ್ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹೆಸರಿನಲ್ಲಿ ಬಡವರು, ವಲಸೆ ಕಾರ್ಮಿಕರು, ಅಲೆಮಾರಿ ಸಮುದಾಯದವರು ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವ ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಹುನ್ನಾರ ನಡೆಯುತ್ತಿದೆ ಎಂದು ಎಸ್‌ಐಆರ್ ಜನವಿರೋಧಿ ಸಮಿತಿ ಹಾಗೂ ನಾಗರಿಕ ಮತ ಕಾವಲು ಸಮಿತಿಯ ಸಂಚಾಲಕ ಓಂಪ್ರಕಾಶ್ ರೊಟ್ಟೆ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಎಎಸ್‌ಡಿಡಿಒ (Absent, Shifted, Dead, Duplicate and Others) ವರ್ಗೀಕರಣ ಅವೈಜ್ಞಾನಿಕವಾಗಿದ್ದು, ಬಿಎಲ್‌ಒ ಭೇಟಿ ವೇಳೆ ಮನೆಯಲ್ಲಿ ಸಿಗದವರು ಅಥವಾ ಸ್ಥಳಾಂತರಗೊಂಡವರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಆತಂಕ ಎದುರಾಗಿದೆ ಎಂದು ಹೇಳಿದರು.
ಆ.4ರ ಮಾಹಿತಿಯಂತೆ ಜಿಲ್ಲೆಯಲ್ಲಿ 14.16 ಲಕ್ಷ ಮತದಾರರಿದ್ದು, 12.14 ಲಕ್ಷ ಮತದಾರರ ಮಾಹಿತಿ ಡಿಜಿಟಲೀಕರಣಗೊಂಡಿದೆ. ಆದರೆ ಪ್ರಸ್ತುತ ಪ್ರಕ್ರಿಯೆಯಿಂದ ಸುಮಾರು 2.45 ಲಕ್ಷ (ಶೇ.16.88) ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಎಲ್‌ಒಗಳಿಗೆ ಸಮರ್ಪಕ ತರಬೇತಿ ನೀಡಿಲ್ಲ. ಅಲೆಮಾರಿ ಸಮುದಾಯ, ಕೊಳಗೇರಿ ನಿವಾಸಿಗಳು ಹಾಗೂ ವಲಸೆ ಕಾರ್ಮಿಕರಿಗೆ ಅಗತ್ಯ ಮಾಹಿತಿ ತಲುಪಿಲ್ಲ. ಉದ್ಯೋಗಕ್ಕಾಗಿ ವಲಸೆ ಹೋಗುವುದು ಅಥವಾ ಬಾಡಿಗೆ ಮನೆ ಬದಲಾಯಿಸುವುದು ಅಪರಾಧವಲ್ಲ. ಕೇವಲ ಬಿಎಲ್‌ಒ ಭೇಟಿ ವೇಳೆ ಮನೆಯಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಹೆಸರು ಕೈಬಿಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಮಹಮ್ಮದ್ ನಿಝಾಮುದ್ದಿನ್, ಮಹೇಶ್ ಗೋರನಾಳಕರ್ ಹಾಗೂ ಜಗದಿಶ್ವರ್ ಬಿರಾದಾರ್, ಶ್ರೀಕಾಂತ್ ಸ್ವಾಮಿ, ಅಬ್ದುಲ್ ಮನ್ನಾನ್ ಸೇಠ್, ವಿಠ್ಠಲದಾಸ್ ಪ್ಯಾಗೆ ಸೇರಿದಂತೆ ಇತರರು ಇದ್ದರು.






