ಬೀದರ್ | ಗಾಂಜಾ ಮಾರಾಟದ ವೇಳೆ ದಾಳಿ ನಡೆಸಿದ ಪೊಲೀಸರು : ಒಬ್ಬ ಆರೋಪಿಯ ಬಂಧನ

ಬೀದರ್ : ನಗರದಿಂದ ಕಮಠಾಣಾಗೆ ಹೋಗುವ ರಸ್ತೆಯಲ್ಲಿರುವ ಕೆಇಬಿ ಫಂಕ್ಷನ್ ಹಾಲ್ ಆವರಣದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿ ಸುಮಾರು 24 ಲಕ್ಷ 92 ಸಾವಿರ ರೂ. ಮೌಲ್ಯದ ಒಟ್ಟು 24.920 ಕೆಜಿ ಗಾಂಜಾ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ರವಿವಾರ ರಾತ್ರಿ ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬೀದರ್-ಕಮಠಾಣಾ ರಸ್ತೆಯಲ್ಲಿರುವ ಕೆಇಬಿ ಫಂಕ್ಷನ್ ಹಾಲ್ ಆವರಣದಲ್ಲಿ ಒಬ್ಬ ವ್ಯಕ್ತಿ ಆಕ್ರಮವಾಗಿ ಪ್ಲಾಸ್ಟಿಕ್ ಚೀಲಗಳಲ್ಲಿ ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದಿತ್ತು. ಈ ಮಾಹಿತಿ ಅಧರಿಸಿ ಪೊಲೀಸರು ದಾಳಿ ನಡೆಸಿದ್ದರು ಎಂದು ಹೇಳಿದ್ದಾರೆ.
ದಾಳಿಯಲ್ಲಿ 24 ಲಕ್ಷ 92 ಸಾವಿರ ರೂ. ಮೌಲ್ಯದ ಒಟ್ಟು 24.920 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.





