ಬೀದರ್ | ಮೇ 4 ರಂದು ಮಹರ್ಷಿ ಭಗೀರಥ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ : ಜಗನ್ನಾಥ ತಡಪಳ್ಳಿ

ಬೀದರ್ : ಮಹರ್ಷಿ ಭಗೀರಥ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಪ್ಪಾರ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಜಗನ್ನಾಥ ತಡಪಳ್ಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಪ್ಪಾರ ಸಮಾಜ ಸಂಘದ ಸಹಯೋಗದಲ್ಲಿ ಮೇ 4 ರಂದು ಬೆಳಿಗ್ಗೆ 11:30 ಕ್ಕೆ ರಂಗಮಂದಿರದಲ್ಲಿ ಮಹರ್ಷಿ ಭಗೀರಥ ಜಯಂತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲು ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಅಂದು ಬೆಳಿಗ್ಗೆ 9:30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂಜೆ ಸಲ್ಲಿಸಿ, ನಂತರ ಮಹರ್ಷಿ ಭಗೀರಥ ಅವರ ಭಾವಚಿತ್ರದ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯು ಶಿವಾಜಿ ವೃತ್ತ, ಭಗತಸಿಂಗ್ ವೃತ್ತ, ಬಸವೇಶ್ವರ್ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಜನರಲ್ ಕರಿಯಪ್ಪ ವೃತ್ತದಿಂದ ನೇರವಾಗಿ ಚನ್ನಬಸವ ಪಟ್ಟದೇವರ ರಂಗಮಂದಿರಕ್ಕೆ ತಲುಪುವುದು ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸಮಾಜದ ಬಾಂಧವರು ಹಾಗೂ ಉಪ್ಪಾರ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜ ಸಂಘದ ಜಿಲ್ಲಾಧ್ಯಕ್ಷ ತಾನಾಜಿ ಸಗರ್, ವಿಜಯಕುಮಾರ್ ಉಪ್ಪಾರ, ಶಾಂತಕುಮಾರ್, ಹಿಂದುಳಿದ ಜಾತಿಗಳ ಒಕ್ಕೂಟದ ಗೌರವ ಅಧ್ಯಕ್ಷ ಬಸವರಾಜ್ ಮಾಳಗೆ, ರಾಜಶೇಖರ್ ಸೇಡಂಕರ್, ಮಹೇಶ್ ಪಾಂಚಾಳ್ ಹಾಗೂ ರಮೇಶ್ ಭಾಗವಹಿಸಿದ್ದರು.







