Bidar | ಅಕ್ರಮವಾಗಿ ಸಂಗ್ರಹಿಸಿದ 48 ಗ್ಯಾಸ್ ಸಿಲಿಂಡರ್ ಸೇರಿ 6 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಸ್ವತ್ತು ಜಪ್ತಿ : ಇಬ್ಬರ ಬಂಧನ

ಬೀದರ್ : ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಜನವಾಡಾ ಪೊಲೀಸ್ ಠಾಣೆ ವ್ಯಾಪ್ತಿಯ ಮರಕಲ್ ಗ್ರಾಮದಲ್ಲಿ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮರಕಲ್ ಗ್ರಾಮದ ಗಣೇಶ ದೇವಸ್ಥಾನದ ಸಮೀಪ ಜನವಾಡಾ ಠಾಣೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಒಟ್ಟು 48 ಹೆಚ್‌ಪಿ ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡರು.
ಜಪ್ತಿಯಾದ ಸಿಲಿಂಡರ್‌ಗಳಲ್ಲಿ 90,200 ರೂ. ಮೌಲ್ಯದ 41 ಖಾಲಿ 14 ಕೆ.ಜಿ ಹೆಚ್‌ಪಿ ಗ್ಯಾಸ್ ಸಿಲಿಂಡರ್‌ಗಳು ಹಾಗೂ 22,295 ರೂ. ಮೌಲ್ಯದ 7 ತುಂಬಿದ ಸಿಲಿಂಡರ್‌ಗಳು ಸೇರಿವೆ. ಒಟ್ಟಾರೆ ಸಿಲಿಂಡರ್‌ಗಳ ಮೌಲ್ಯ 1,12,495 ರೂ. ಎಂದು ಅಂದಾಜಿಸಲಾಗಿದೆ.
ಇದಲ್ಲದೆ, ಕೃತ್ಯಕ್ಕೆ ಬಳಸಲಾಗಿದ್ದ ಸುಮಾರು 5,12,495 ರೂ. ಮೌಲ್ಯದ ಎರಡು ಗೂಡ್ಸ್ ಆಟೋಗಳನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಒಟ್ಟು 6,24,990 ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ವಶಪಡಿಸಿಕೊಂಡ ಗ್ಯಾಸ್ ಸಿಲಿಂಡರ್‌ಗಳು ಸುಜಾತಾ ಗ್ಯಾಸ್ ಏಜೆನ್ಸಿಗೆ ಸೇರಿದ್ದವು ಎಂಬ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸುಜಾತಾ ಗ್ಯಾಸ್ ಏಜೆನ್ಸಿ ವಿರುದ್ಧ ಜನವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






