ಬೀದರ್ | ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ : ಸಿಇಒ ಡಾ. ಗಿರೀಶ್ ಬದೋಲೆ

ಬೀದರ್ : ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅವರು ತಿಳಿಸಿದರು.
ನಗರದ ಬಾಲ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ, ಆರೋಗ್ಯ, ರಕ್ಷಣೆ, ಮೂಲಭೂತ ಸೌಕರ್ಯಗಳು ಒದಗಿಸುವಿಕೆ ಸೇರಿದಂತೆ ಅವರ ಎಲ್ಲಾ ಹಕ್ಕುಗಳನ್ನು ಕಾಪಾಡುವುದು ಹಾಗೂ ಉತ್ತಮ ಭವಿಷ್ಯ ರೂಪಿಸುವುದು ಬಹಳ ಮುಖ್ಯವಾಗಿದೆ. ದೇಶದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಮಕ್ಕಳ ಮೇಲೆ ಅಗಾಧವಾದ ಪ್ರೀತಿ ಇತ್ತು. ಅವರ ಜನ್ಮದಿನವನ್ನು ನಾವು ಮಕ್ಕಳ ದಿನಾಚರಣೆ ಎಂದು ಆಚರಣೆ ಮಾಡುತ್ತೆವೆ ಎಂದರು.
ದೇಶದ ಮುಂದಿನ ಭವಿಷ್ಯ ಇಂದಿನ ಮಕ್ಕಳಾಗಿದ್ದಾರೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂದಿನ ಮಕ್ಕಳು ಮುಂದೆ ಐಎಎಸ್, ಐಪಿಎಸ್, ವಿಜ್ಞಾನಿಗಳು, ವೈದ್ಯರು, ಶಿಕ್ಷಕರು, ಕ್ರೀಡಾಪಟುಗಳು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳು, ಸ್ಥಾನಗಳು ಅಲಂಕರಿಸುತ್ತಾರೆ ಎಂದು ತಿಳಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಹಾಗೆಯೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ್ ಎಂ.ಎಸ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೂಪಾ ಕೋಟೆಗೌಡರ್, ಶಿಶು ಅಭಿವೃದ್ಧಿ ಅಧಿಕಾರಿ ಶಾರದಾ ಕಲ್ಮಲ್ಕರ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸುಭಾಷ್ ರತ್ನ ಹಾಗೂ ಶ್ರೀಕಾಂತ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.







