ಬೀದರ್ | ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ಆರೋಪ : ಪ್ರತಿಭಟನೆ

ಬೀದರ್ : ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರ ಮೇಲೆ ಶುಕ್ರವಾರ ಮಧ್ಯರಾತ್ರಿ ಸುಮಾರು 12:30 ಗಂಟೆಗೆ ನಾಲ್ಕೈದು ಜನ ಸೇರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಇಂದು ವೈದ್ಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ರಾತ್ರಿಯ ವೇಳೆ ಫಿಜಿಷಿಯನ್ ವೈದ್ಯ ಡಾ.ಮಹಾದೇವಪ್ಪ ಹಣಮಂತಪ್ಪ ಅವರು ಬಸವಕಲ್ಯಾಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅದೇ ವೇಳೆ ನಾಲ್ಕೈದು ಜನರು ಕುಡಿದ ಅಮಲಿನಲ್ಲಿ ಆಸ್ಪತ್ರೆಗೆ ಒಬ್ಬ ರೋಗಿಯನ್ನು ಕರೆದುಕೊಂಡು ಬಂದಿರುತ್ತಾರೆ. ಈ ವೇಳೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ವೈದ್ಯರಿಗೆ ಸೂಕ್ತ ಭದ್ರತೆ ನೀಡಬೇಕು ಹಾಗೆಯೇ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯೆ ಡಾ. ಅಪರ್ಣಾ ಮಹಾನಂದ್, ಟಿಎಚ್ಓ ಡಾ.ಅಶೋಕಕ್ ಮೈಲಾರಿ, ಡಾ.ಯುವರಾಜ್ ಬಿರಾದಾರ್, ಡಾ. ದೀಪಕ್ ಜಾಧವ್, ಡಾ.ಮಹಾದೇವ್, ಡಾ.ಸಂದೀಪ್ ಬಿರಾದಾರ್, ಡಾ.ಪ್ರಶಾಂತ್ ಪಾಟೀಲ್, ಡಾ.ಅವಿನಾಶ್ ಭೈರೆ, ಡಾ. ಜ್ಯೋತಿ ಖಂಡ್ರೆ, ಡಾ. ಜಕೀಯೊದ್ದಿನ್ ಹಾಗೂ ಡಾ. ತಾಜೋದ್ದಿನ್ ಸೇರಿದಂತೆ ಇನ್ನಿತರ ಆಸ್ಪತ್ರೆಯ ವೈದ್ಯ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.







