ಬೀದರ್ | ಬಸವಾದಿ ಶಿವಶರಣರ ಹಿಂದೂ ಸಮಾವೇಶ ವಿರೋಧಿಸಿ ಪ್ರತಿಭಟನೆ

ಬೀದರ್ : ಕನ್ನೇರಿ ಸ್ವಾಮಿಯ ನೇತೃತ್ವದ ಬಸವಾದಿ ಶಿವ ಶರಣರ ಹಿಂದೂ ಸಮಾವೇಶ ವಿರೋಧಿಸಿ ಕರ್ನಾಟಕದ ಹಲವಾರು ಜಿಲ್ಲೆ, ಮಹಾರಾಷ್ಟ್ರ ಹಾಗೂ ಹೈದರಾಬಾದ್ ನಿಂದ ಬಂದ ಬಸವ ಅನುಯಾಯಿಗಳಿಂದ ಪ್ರತಿಭಟನೆ ನಡೆಸಿದರು.
ಬಸವಕಲ್ಯಾಣದ ಹೊರ ವಲಯದಲ್ಲಿರುವ ಬಂಗಲಾದ ಹತ್ತಿರವಿರುವ ರಾಷ್ಟ್ರೀಯ ಹೆದ್ದಾರಿ-65 ರ ಮೇಲೆ ರವಿವಾರ ಪ್ರತಿಭಟನೆ ನಡೆಸಿ, ಬಸವಾದಿ ಶಿವ ಶರಣರ ಹಿಂದೂ ಸಮಾವೇಶ, ಕನ್ನೇರಿ ಸ್ವಾಮಿ ಹಾಗೂ ಆರ್ ಎಸ್ ಎಸ್ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಡಾ. ಮೀನಾಕ್ಷಿ ಬಾಳಿ ಅವರು ಮಾತನಾಡಿ, ಬಸವ ಧರ್ಮ ಶೂದ್ರ, ದುಡಿಯುವವರ ಧರ್ಮವಾಗಿದೆ. ಈ ಬಸವಾದಿ ಶಿವ ಶರಣರ ಹಿಂದೂ ಸಮಾವೇಶವು ಆರ್ ಎಸ್ ಎಸ್ ನವರು ಮಾಡುತ್ತಿದ್ದಾರೆ. ಅವರು ವೇದಕ್ಕೆ ಒರೆಯ ಕಟ್ಟುವೆ ಎನ್ನುವ ವಚನ ಹೇಳುವುದಿಲ್ಲ. ಶಾಸ್ತ್ರಗಳು ಹೆಣ್ಣು, ಅಸ್ಪೃಶ್ಯರು ಕನಿಷ್ಠ ಬ್ರಾಹ್ಮಣರು ಶ್ರೇಷ್ಠ ಎಂದು ಹೇಳುತ್ತವೆ. ನಮಗೆ ಬಾಬಾಸಾಹೇಬರು ನೀಡಿದ ಸಂವಿಧಾನದಿಂದಲೇ ಅಕ್ಷರ ಸಿಕ್ಕಿದೆ. ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ತತ್ವಗಳ ಮೇಲೆ ನಡೆಯುವವರಾಗಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ತತ್ವಕ್ಕೆ ಬದ್ಧರಾದವರಿಗೆ ಮಾತ್ರ ನಮ್ಮ ಮತದಾನವಿರುತ್ತದೆ. 2027ರಲ್ಲಿ ಸನಾತನಿಗಳು ಬಸವ ಭಾರತ ಉತ್ಸವ ಎನ್ನುವ ನಾಟಕ ತೆಗೆದುಕೊಂಡು ಬರುತ್ತಿದ್ದಾರೆ. ಹಾಗಾಗಿ ಎಚ್ಚರದಿಂದ ಇರಬೇಕು. ಇಲ್ಲಿನ ನಮ್ಮ ಸ್ವಾಮೀಜಿಗಳಿಗೆ ಅರ್ಥ ಆಗುವುದಿಲ್ಲ. ಸ್ವಾಮಿಗಳು ಯಾವುದಾದರು ಒಂದು ಕಡೆಗೆ ಇರಬೇಕು. ಸನಾತನಿಗಳ ಕಡೆಗೆ ಇದ್ದರೆ ನಮ್ಮನ್ನು ಬಿಡಬೇಕು. ನಮ್ಮನ್ನು ಬಿಟ್ಟರೆ ಸನಾತನಿಗಳ ಜೊತೆಗೆ ಹೋಗಬೇಕು. ಎರಡು ಕಡೆಗೆ ಇರುವುದು ಚೆನ್ನಾಗಿರುವುದಿಲ್ಲ ಎಂದು ಇಲ್ಲಿನ ಮಠಾಧೀಷರ ವಿರುದ್ಧ ಕಿಡಿ ಕಾರಿದರು.
ಹೋರಾಟಗಾರ್ತಿ ಕೆ. ನೀಲಾ ಅವರು ಮಾತನಾಡಿ, ರಾಜ್ಯ ಸರಕಾರ ಸಾಂಸ್ಕೃತಿಕ ನಾಯಕ ಎಂದು ಬಸವಣ್ಣನವರನ್ನು ಘೋಷಣೆ ಮಾಡಿದೆ. ಆರ್ ಎಸ್ ಎಸ್ ನವರು ಇಂತಹ ಸಮಾವೇಶ ಮಾಡುವುದನ್ನು ಕೂಡ ಸರ್ಕಾರ ತಡೆಯಬೇಕು. ಬಸವಕಲ್ಯಾಣವನ್ನು ಪುರೋಹಿತಶಾಹಿಯನ್ನಾಗಿ ಮಾಡುವ ಹುನ್ನಾರ ಇದೆ. ಇದನ್ನು ಆಗಲು ನಾವು ಬಿಡಬಾರದು ಎಂದು ಗುಡುಗಿದರು.
ಇಡೀ ಜಗತ್ತಿನ ಮೊದಲ ಭಯೋತ್ಪಾದಕ ಸನಾತನವಾದಿಗಳಾಗಿದ್ದಾರೆ. ಅವರೇ ಕಲ್ಯಾಣದಲ್ಲಿ ಹರಳಯ್ಯ ಮಧುವರಸ ದಂಪತಿಗಳಿಗೆ ಆನೆ ಕಾಲಿಗೆ ಕಟ್ಟಿ ಎಳೆದರು. ಅಂದಿನ ದಿನಗಳಲ್ಲಿ ಸನಾತನಿಗೆ ಶರಣರು ಹೆದರಲಿಲ್ಲ. ಆದರೆ ಇಂದಿನ ಕೆಲ ಮಠಾಧೀಶರು ಸನಾತನಿಗಳ ಸಂಧಾನ ಮಾಡಿಕೊಂಡಿದ್ದಾರೆ. ಇವರು ಸಂಧಾನ ಯಾಕೆ ಮಾಡಿಕೊಂಡರು? ಬಸವಾದಿ ಶರಣರ ಹಿಂದೂ ಸಮಾವೇಶದ ವಿರುದ್ಧ ಹೋರಾಟ ಯಾಕೆ ಹಿಂದಕ್ಕೆ ತೆಗೆದುಕೊಳ್ಳಲಾಯಿತು ಎಂದು ಇಲ್ಲಿನ ಮಠಾಧೀಶರಿಗೆ ಖಾರವಾಗಿ ಪ್ರಶ್ನೆ ಮಾಡಿದರು.
ಈ ವೇಳೆ ಬಸವರಾಜ್ ಬುಳ್ಳಾ, ಪ್ರೊ. ಆರ್. ಕೆ ಹುಡಗಿ, ಆರ್. ಜಿ ಶೇಟಕಾರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಚನ್ನಬಸವ, ಮಾರುತಿ ಗೋಖಲೆ, ರವಿ ಪಾಪಡೆ, ಸಿದ್ರಾಮ್ ಶೇಟಗಾರ್, ಬಸವ ಪಾಟೀಲ್, ರವೀಂದ್ರ ಕೊಳಕೂರ್, ವಿಜಯಲಕ್ಷ್ಮಿ ಗಡ್ಡೆ, ಸಿದ್ದಪ್ಪ ಮೂಲಗೆ, ಬಾದರ್ಲಿ, ಗಗನ್ ಫುಲೆ, ಶಶಿಕಾಂತ್ ಡಾಂಗೆ, ನಾಗಾರ್ಜುನ್ ಹಾಗೂ ವೀಣಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






