ಬೀದರ್ | ಛಲವಾದಿ ನಾರಾಯಣ ಸ್ವಾಮಿ, ಎನ್.ರವಿಕುಮಾರ್, ಮಣಿಕಂಠ ರಾಠೋಡ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ

ಬೀದರ್ : ಸಚಿವ ಪ್ರಿಯಾಂಕ್ ಖರ್ಗೆ ಅವರ ತೇಜೋವಧೆ ಮಾಡುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರ ಸದಸ್ಯತ್ವ ರದ್ದುಪಡಿಸಿ, ಮಣಿಕಂಠ ರಾಠೋಡ್ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಇಂದು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.
ಪ್ರತಿಭಟನೆಯ ಸಮಯದಲ್ಲಿ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಹಾಗೂ ಮಣಿಕಂಠ ರಾಠೋಡ್ ಅವರ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಂತರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ದಲಿತ ಮುಖಂಡ ಅನಿಲಕುಮಾರ್ ಬಿಲ್ದಾರ್ ಅವರು, ಕಲ್ಯಾಣ ಕರ್ನಾಟಕದ ಯುವಕರ ಕಣ್ಮಣಿಯಾದ ಪ್ರಿಯಾಂಕ್ ಖರ್ಗೆ ಅವರನ್ನು ರಾಜಕೀಯವಾಗಿ ಹಿಂದೆ ಸರಿಸಬೇಕು ಎನ್ನುವ ಹುನ್ನಾರ ನಡೆಯುತ್ತಿದೆ. ಈ ಹುನ್ನಾರದ ಭಾಗವಾಗಿ ಛಲವಾದಿ ನಾರಾಯಣಸ್ವಾಮಿ ಅವರು ಕಳೆದ ಮೂವತ್ತು ವರ್ಷ ಖರ್ಗೆ ಅವರ ಮನೆ ಬಾಗಿಲು ಕಾದು, ಎಲ್ಲ ಅಧಿಕಾರ ಅಂತಸ್ತು ಪಡೆದು ಇವತ್ತು ಯಾವುದೋ ಒಂದು ಸಣ್ಣ ಆಮಿಷಕ್ಕೆ ಒಳಗಾಗಿ ಬಾಬಾಸಾಹೇಬರ ವಿಚಾರಧಾರಕ್ಕೆ, ಖರ್ಗೆ ಅವರ ಕುಟುಂಬಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಾಬುರಾವ್ ಪಾಸ್ವಾನ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷ ಶ್ರೀಪತರಾವ್ ದೀನೆ, ದಲಿತ ವಿದ್ಯಾರ್ಥಿ ಪರಿಷತನ ಜಿಲ್ಲಾ ಸಂಚಾಲಕ ಸಂದೀಪ್ ಕಾಂಟೆ, ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಂಬಾದಾಸ್ ಗಾಯಕವಾಡ್, ಶಿವಕುಮಾರ್ ನೀಲಿಕಟ್ಟಿ, ಬಂಜಾರಾ ಸಮಾಜದ ಮುಖಂಡ ಗೋವರ್ಧನ್ ರಾಠೋಡ್, ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ನಾಟೆಕರ್, ಸಾಯಿ ಶಿಂಧೆ, ರಘುನಾಥ್ ಗಾಯಕವಾಡ್, ಬಾಬು ಮಿಠಾರೆ, ರಮೇಶ್ ಮಂದಕನಳ್ಳಿ, ರಮೇಶ್ ಪಾಸ್ವಾನ್, ಸುನಿಲ್ ಸಂಗಮ, ಅಂಬೇಡ್ಕರ್ ಸಾಗರ್, ಭಗತ್ ಶಿಂಧೆ, ಶಿವರಾಜ್ ಲಾಡಕರ್, ಕಲ್ಯಾಣರಾವ್ ಗುನ್ನಳ್ಳಿಕರ್ ಹಾಗೂ ಪುಟ್ಟರಾಜ್ ದೀನೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.







