ಬೀದರ್ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ಪ್ರತಿಭಟನೆ

ಬೀದರ್ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆದ ಮನುವಾದಿ ವಕೀಲ ಕಿಶೋರ್ ರಾಕೇಶ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ವ್ಯಕ್ತಿಗಳ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸುವ ಕಠಿಣ ಕಾನೂನು ರೂಪಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕಿಶೋರ್ ರಾಕೇಶ್ ಅವರ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಮತ್ತು ನ್ಯಾಯಾಂಗದ ವಿರುದ್ಧ ಧಿಕ್ಕಾರ ವ್ಯಕ್ತಪಡಿಸುವವರನ್ನು ರಾಷ್ಟ್ರದ್ರೋಹಿಗಳೆಂದು ಪರಿಗಣಿಸಬೇಕು. ಕೇಂದ್ರ ಸರ್ಕಾರವು ತಕ್ಷಣವೇ ಕಿಶೋರ್ ರಾಕೇಶ್ ವಿರುದ್ಧ ಕ್ರಮ ಕೈಗೊಂಡು ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ವಿರೋಧವಾಗಿ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲ ಬಾಬುರಾವ್ ಹೊನ್ನಾ, ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ, ಡಿಎಸ್ಎಸ್ ರಾಜ್ಯ ಉಪಾಧ್ಯಕ್ಷ ರಾಜಕುಮಾರ್ ಮೂಲಭಾರತಿ, ಆರ್ ಪಿ ಐ (ಅಂಬೇಡ್ಕರ್) ಪಕ್ಷದ ರಾಜ್ಯಾಧ್ಯಕ್ಷ ಮಹೇಶ್ ಗೋರನಾಳಕರ್, ಪೀಪಲ್ಸ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಮುಬಾಶಿರ್ ಶಿಂದೆ, ಅರುಣ್ ಪಟೇಲ್, ವಹೀಲ್ ಲಖನ್, ಡಾ. ಕಾಶಿನಾಥ್ ಚೆಲ್ವಾ, ಶಿವರಾಜ್ ತಡಪಳ್ಳಿ, ಪ್ರಕಾಶ್ ರಾವಣ್, ರಾಜಪ್ಪಾ ಗೂನ್ನಳ್ಳಿಕರ್, ಮಾಣಿಕ್ ಖಾನಾಪೂರೆ ಹಾಗೂ ವಿನೋದ್ ಬಂದಗೆ ಸೇರಿದಂತೆ ಅನೇಕ ಮಹಿಳೆಯರು, ಯುವಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.







