Bidar | ಸ್ಮಶಾನಭೂಮಿ ಮಂಜೂರಿಗೆ ಆಗ್ರಹಿಸಿ 8ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ : ಸ್ಥಳಕ್ಕೆ ಸಚಿವ ಈಶ್ವರ್ ಖಂಡ್ರೆ ಭೇಟಿ

ಬೀದರ್: ತಾಲೂಕಿನ ಅಮಲಾಪುರ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯವು ಹಲವು ದಶಕಗಳಿಂದ ಬಳಸಿಕೊಂಡು ಬರುತ್ತಿರುವ ಸರ್ವೆ ನಂ. 71ರ ಜಮೀನನ್ನು ಅಧಿಕೃತ ಸ್ಮಶಾನ ಭೂಮಿಯಾಗಿ ಮಂಜೂರು ಮಾಡಿ ಪಹಣಿ ಪತ್ರಿಕೆಯಲ್ಲಿ ದಾಖಲಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ ಎಂಟನೇ ದಿನವೂ ಮುಂದುವರಿಯಿತು.
ಪ್ರತಿಭಟನಾ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಆದರೆ ಸಚಿವರ ಮೌಖಿಕ ಭರವಸೆಗೆ ಒಪ್ಪದ ಪ್ರತಿಭಟನಾಕಾರರು, ಸರ್ವೆ ನಂ. 71ರ ಜಮೀನನ್ನು ಸ್ಮಶಾನ ಭೂಮಿಯಾಗಿ ಪಹಣಿಯಲ್ಲಿ ಅಧಿಕೃತವಾಗಿ ದಾಖಲಿಸುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ಸ್ಮಶಾನ ಭೂಮಿ ನಮ್ಮ ಹಕ್ಕು. ಲಿಖಿತ ಆದೇಶ ಮತ್ತು ಪಹಣಿ ದಾಖಲಾತಿ ದೊರೆಯುವವರೆಗೆ ಹೋರಾಟ ಮುಂದುವರಿಯುತ್ತದೆ” ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಪ್ರತಿಭಟನೆಗೆ ಹಲವು ದಲಿತ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಶಾಸಕ ರಹೀಮ್ ಖಾನ್, ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ, ಎಡಿಸಿ ಸುರೇಖಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠಲರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






