ಬೀದರ್: ಎಸ್ಐಆರ್ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲು ಆಗ್ರಹಿಸಿ ಧರಣಿ

ಬೀದರ್: ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ಮತದಾರ ಹೊರಗುಳಿಯದಂತೆ ನೋಡಿಕೊಳ್ಳಲು ಎಸ್ಐಆರ್ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಬಸವಕಲ್ಯಾಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿ ಎಸ್ಐಆರ್ ವಿರುದ್ಧ ಘೋಷಣೆಗಳು ಕೂಗಿದರು. ನಂತರದಲ್ಲಿ ತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಪ್ರಕ್ರಿಯೆ ವಿಶೇಷವಾಗಿ ಮಹಿಳೆ, ವಲಸೆ ಕಾರ್ಮಿಕ, ಅಲೆಮಾರಿ, ಆದಿವಾಸಿ, ದಮನಿತ ಸಮುದಾಯಗಳನ್ನು ಹಾಗೂ ಅಲ್ಪಸಂಖ್ಯಾತರನ್ನು ಬೃಹತ್ ಸಂಖ್ಯೆಯಲ್ಲಿ ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ಹೊರದಬ್ಬುತ್ತಿದೆ. ಎಸ್ಐಆರ್ ಪ್ರಕ್ರಿಯೆ ಹೊರಹಾಕಿದವರಿಗೆ ಯಾವ ಸರ್ಕಾರಿ ಸೌಲಭ್ಯಗಳೂ ದೊರಕುವುದಿಲ್ಲ ಎಂದು ಬಿಜೆಪಿ ಆಡಳಿತರೂಢ ರಾಜ್ಯಗಳ ಮುಖ್ಯಮಂತ್ರಿಗಳು ಘೋಷಿಸುತ್ತಿದ್ದಾರೆ ಎಂದು ದೂರಲಾಗಿದೆ.
ಈಗಾಗಲೇ ಎಸ್ಐಆರ್ ನಡೆದ ರಾಜ್ಯಗಳಲ್ಲಿ ಇದುವರೆಗೆ 6.5 ಕೋಟಿ ಮತದಾರರನ್ನು ಮತ ಪಟ್ಟಿಯಿಂದ ತೆಗೆಯಲಾಗಿದೆ. ಇದರಲ್ಲಿ ಕನಿಷ್ಠ ಅರ್ಹ ಮತದಾರರು ಇದ್ದಾರೆ ಎಂಬುದು ಅನೇಕ ಅಧ್ಯಯನಗಳು ನಿರೂಪಿಸಿವೆ. ಪಶ್ಚಿಮ ಬಂಗಾಳದಲ್ಲಂತೂ ದಾಖಲೆಗಳಿದ್ದರೂ 27 ಲಕ್ಷ ಜನರಿಗೆ ಮತದಾನದ ಹಕ್ಕನ್ನು ನಿರಾಕರಿಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಅಲ್ಲಿ ಬಳಸಲಾದ ಲಾಜಿಕಲ್ ಡಿಸ್ಕ್ರಿಪೆನ್ಸಿ ಸಾಫ್ಟ್ ವೇರ್ ಸೃಷ್ಟಿಸಿದ ಅವಾಂತರ ಹಾಗೂ ಅದರ ಹಿಂದಿನ ರಾಜಕೀಯ ದುರುದ್ದೇಶ ನ್ಯಾಯಾಂಗಕ್ಕೆ ಕಾಣದಿದ್ದರೂ ಇಡೀ ದೇಶದ ಜನರ ಕಣ್ಣಿಗೆ ನಿಚ್ಚಳವಾಗಿ ಗೋಚರಿಸಿದೆ ಎಂದು ತಿಳಿಸಲಾಗಿದೆ.
ಲಾಜಿಕಲ್ ಡಿಸ್ಕ್ರಿಪೆನ್ಸಿ ಎನ್ನುವ ಅತಂತ್ಯ ಅವೈಜ್ಞಾನಿಕ, ಅವಾಸ್ತವಿಕ, ಅಪಾರದರ್ಶಕ ಹಾಗೂ ದುರುದೇಶಪೂರಿತ ವಿಧಾನವನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಳವಡಿಸಬಾರದು. ಯಾರ ಮತವನ್ನಾದರೂ ಸುಲಭವಾಗಿ ಹುಡುಕಬಹುದಾದ ರೀತಿಯಲ್ಲಿ, ಪಾರದರ್ಶಕತೆ ಇರುವ ರೀತಿಯಲ್ಲಿ ಅದನ್ನು 'ಕಂಪ್ಯೂಟರ್ ರೀಡಬಲ್ ಫಾರ್ಮ್ಯಾಟಿ'ನಲ್ಲಿ ನೀಡಬೇಕು. ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಚುನಾವಣಾ ಆಯೋಗದ ಮ್ಯಾನುಯಲ್‌ನಲ್ಲಿ ಇರುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಪ್ರದೇಶಗಳಲ್ಲಿ ಆ ಭಾಗದ ಮತದಾರರ ಕರಡು ಪಟ್ಟಿಯನ್ನು ಬಹಿರಂಗವಾಗಿ ಪ್ರಕಟಿಸಿ, ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ, ಮುಕ್ತವಾದ ರೀತಿಯಲ್ಲಿ, ಎಲ್ಲರ ಸಮ್ಮುಖದಲ್ಲಿ ತಿದ್ದುಪಡಿಗಳನ್ನು ಮಾಡಬೇಕು. ಈ ಪ್ರಕ್ರಿಯೆಯನ್ನು ಗಡಿಬಿಡಿಯಲ್ಲಿ ನಡೆಸದೆ, ಕನಿಷ್ಠ 1 ವರ್ಷಗಳ ಅವಧಿ ನಿಗದಿ ಮಾಡಬೇಕು. ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಅಲೆಮಾರಿಗಳು, ಆದಿವಾಸಿಗಳು, ದಲಿತರು, ಬಡ ಅಲ್ಪಸಂಖ್ಯಾತರು ಮುಂತಾದ ದಾಖಲೆಗಳ ಗಂಭೀರ ಸಮಸ್ಯೆ ಎದುರಿಸುತ್ತಿರುವ ಜನ ವರ್ಗಗಳು ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ವಂಚಿತರಾಗದಂತೆ ಒಳಗೊಳ್ಳಲು ಅವರಿಗಾಗಿ ವಿಶೇಷ ಸರಳ ಕ್ರಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಎದ್ದೇಳು ಕರ್ನಾಟಕದ ಜಿಲ್ಲಾ ಸಂಯೋಜಕ ಸಂದೀಪ್ ಮುಕಿಂದೆ, ತಾಲೂಕು ಸಂಯೋಜಕ ಇಕ್ರಾಮ್ ಖಾದಿವಾಲೆ, ವಾಯ್ಸ್ ಆಫ್ ಅಂಬೇಡ್ಕರ್ ಸಂಘಟನೆಯ ಅಧ್ಯಕ್ಷ ಸುರೇಶ್ ಮೋರೆ, ಭೀಮ್ ಆರ್ಮಿ ಅಧ್ಯಕ್ಷ ಚೇತನ್ ಕಾಡೆ, ಯುಥ್ ಕಾಂಗ್ರೆಸ್ಸಿನ ನಗರಾಧ್ಯಕ್ಷ ಎಂ ಡಿ ಜಾಬೇರ್, ಯುವ ಮುಖಂಡ ರಿಯಾಜ್ ಪಟೇಲ್, ಜಮಾತ್-ಎ-ಇಸ್ಲಾಮಿ-ಹಿಂದ್ ಮುಖಂಡ ಇಫ್ತಿಕಾರ್ ಅಹಮದ್ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.






