ಬೀದರ್ | ರಾಜ್ಯದಲ್ಲಿ ಆರೆಸ್ಸೆಸ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ

ಬೀದರ್ : ರಾಜ್ಯದಲ್ಲಿ ವಿಶೇಷವಾದ ಕಾನೂನು ರೂಪಿಸಿ ಆರೆಸ್ಸೆಸ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಹಾಗೆಯೇ ವಿವಿಧ ಬೇಡಿಕೆಗಳು ಈಡೇರಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಇಂದು ಹುಮನಾಬಾದ್ ನಗರದಲ್ಲಿ ಸಾಂಕೇತಿಕ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ಈ ಪ್ರತಿಭಟನಾ ರ‍್ಯಾಲಿಗೆ ಬ್ಲಾಕ್ ಕಾಂಗ್ರೆಸ್ ಕಮಿಟಿಯು ಬೆಂಬಲ ಸೂಚಿಸಿತು.
ನಗರದ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿ, ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ, ಸರ್ವೋಚ್ಚ ನ್ಯಾಯಾಲಯದ ಕಲಾಪದ ವೇಳೆ ರಾಕೇಶ್ ಕಿಶೋರ್ ಎಂಬ ವಕೀಲ ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುತ್ತಾನೆ. ಈ ಪ್ರಕರಣ ಅತ್ಯಂತ ಖಂಡನೀಯವಾಗಿದ್ದು, ಇದು ಕೇವಲ ನ್ಯಾಯಾಮೂರ್ತಿಗಳ ಮೇಲೆ ಆದ ಹಲ್ಲೆಯಲ್ಲ. ಇಡೀ ದೇಶದ 144 ಕೋಟಿ ಜನಸಂಖ್ಯೆ ಮತ್ತು ಸಂವಿಧಾನದ ಮೇಲಿನ ಹಲ್ಲೆಯಾಗಿದೆ. ಶೂ ಎಸೆದ ವಕೀಲನನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಮಹಾರಾಷ್ಟ್ರ ಮೂಲದ ದಾನೇಶ್ ನರೋನೆ ಎನ್ನುವ ಸನಾತನಿ ವ್ಯಕ್ತಿ ಸಚಿವ ಪ್ರೀಯಾಂಕ್ ಖರ್ಗೆ ಅವರಿಗೆ ಮೊಬೈಲ್ ಕರೆ ಮಾಡಿ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಅಪಮಾನ ಮಾಡಿರುವ ಘಟನೆ ಖಂಡನೀಯವಾಗಿದೆ. ಖರ್ಗೆ ಅವರ ಪರಿವಾರ ಬುದ್ದ ಬಸವ, ಅಂಬೇಡ್ಕರ್ ಅವರ ಪರಂಪರೆವುಳ್ಳವರಾಗಿದ್ದು, ಪರಧರ್ಮ ಸಂಹಿಷ್ಣತೆ ಉಳ್ಳವರಾಗಿದ್ದಾರೆ. ಸಾಂಸ್ಕೃತಿ ಹಾಗೂ ಸಂಪ್ರಾದಾಯ ಮೌಲ್ಯಗಳ ಬಗ್ಗೆ ಮಾತನಾಡುವ ಆರೆಸ್ಸೆಸ್ ನವರು ನಡೆ ನುಡಿಗಳಲ್ಲಿ ಸೌಜನ್ಯ ಮತ್ತು ಘನತೆ ಇರಬೇಕಾಗಿತ್ತು. ಆದರೆ ಖರ್ಗೆ ಅವರಿಗೆ ವೈಯಕ್ತಿಕ ನಿಂದನೆ ಮಾಡಿ ಬೆದರಿಕೆ ಹಾಕುವುದು ತೀವ್ರವಾಗಿ ಖಂಡಿಸಲಾಗಿದೆ.
ರಾಜ್ಯದಲ್ಲಿ ವಿಶೇಷವಾದ ಕಾನೂನು ರೂಪಿಸಿ ಆರೆಸ್ಸೆಸ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪ್ರೀಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಇರುವುದರಿಂದ ಅವರಿಗೆ ಝಡ್ ಶ್ರೇಣಿಯ ಭದ್ರತೆ ಒದಗಿಸಬೇಕು. ಅವರಿಗೆ ಜೀವ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಯನ್ನು ಕೂಡಲೇ ಕಠಿಣ ಶಿಕ್ಷೆಗೆ ಗುರಿಪಡಿಸಿ ದೇಶದಿಂದ ಗಡಿಪಾರು ಮಾಡಬೇಕು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಗ್ವಾಲಿಯರ್‌ನ ಉಚ್ಚ ನ್ಯಾಯಾಲಯದ ವಕೀಲ ಅನೀಲ್ ಮಿಶ್ರಾ ಇವನನ್ನು ಬಾರ್ ಕೌನ್ಸಿಲ್‌ನಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸುರೇಶ್ ಘಾಂಗ್ರೆ, ರಮೇಶ್ ಡಾಕುಳಗಿ, ಲಕ್ಷೀಪುತ್ರ ಮಾಳಗೆ, ಅನಿಲ್ ದೊಡ್ಡಿ, ಲೊಕೇಶ್ ಮೇತ್ರೆ, ಸತೀಶ್ ರತ್ನಾಕರ್, ಶಿವಾನಂದ್ ಕಟ್ಟಿಮನಿ, ರಾಹುಲ್, ಮನೋಜ್ ಜಾನವೀರ್, ವೀರಪ್ಪಾ ಭೂತಾಳೆ, ಮುಕೇಶ್ ಪಾಂಡೆ, ಶರಣಪ್ಪ ಮೇತ್ರೆ, ಜಗನ್ನಾಥ್ ನವಲೆ, ಸುನಿಲ್ ಶಿವನಾಯಕ್, ಸುಧಾಕರ್ ಮಾಡಗೋಳ್, ಬಸವರಾಜ್ ಮಾಳಗೆ, ಅಹಮ್ಮದ್ ಮೈನೋದ್ದಿನ್ ಅಫಸರ್ ಮಿಯ್ಯಾ, ರಾಹಿಲ್ ಖಿಲ್ಜಿ, ಉಮೇಶ್ ಕುಲಕರ್ಣಿ, ಓಂಕಾರ್ ತುಂಬಾ, ಪಾರ್ವತಿ ಶೇರಿಕಾರ್ ಹಾಗೂ ಧರ್ಮರೆಡ್ಡಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.







