Bidar | ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಆಗ್ರಹಿಸಿ ಧರಣಿ

ಬೀದರ್: ನಗರದ ಕುಂಬರವಾಡ ಬಡಾವಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ವೆ ನಂ. 51/1ರ ಜಾಗವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಶುದ್ಧೋಧನ ಮಹಾಮಾಯೆ ಸಾಮಾಜಿಕ, ಸಾಂಸ್ಕೃತಿಕ ಸಂಘದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕುಂಬರವಾಡದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸರ್ವೆ ನಂ. 51/1ರ ಜಾಗದಲ್ಲಿ ಶುಕ್ರವಾರ ನೂರಾರು ಜನರು ಪ್ರತಿಭಟನೆ ನಡೆಸಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿದರು.
ಕಳೆದ 25 ವರ್ಷಗಳಿಂದ ಇದೇ ಜಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ರಮಾಬಾಯಿ ಜಯಂತಿ, ಬುದ್ಧ ಪೂರ್ಣಿಮೆ, ವಿಜಯದಶಮಿ ಸೇರಿದಂತೆ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಈ ಜಾಗವನ್ನು ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸರ್ವೆ ನಂ. 51/1ರಲ್ಲಿನ 75×80 ಅಡಿ ವಿಸ್ತೀರ್ಣದ ಜಾಗವನ್ನು ಬೀದರ್ ಮಹಾನಗರ ಪಾಲಿಕೆಯ ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಕಾಯ್ದಿರಿಸಿರುವ ಜಾಗವೆಂದು ನಮೂದಿಸಬೇಕು ಎಂದು ಒತ್ತಾಯಿಸಿದರು.
ಈ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರ್ಕಾರದಿಂದ 1 ಕೋಟಿ ರೂ. ಅನುದಾನ ಮಂಜೂರು ಮಾಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಲಿಂಗಪ್ಪ ಕಡೆಮನಿ, ಸಿದ್ದಪ್ಪ ಕಾಂಬಳೆ, ಸುಭಾಷ ವರ್ಮಾ, ಪ್ರಭಾವತಿ ಕಾಂಬಳೆ, ನೀಲಮ್ಮ ಕರೆಂಜೆ, ಸತೀಶ್, ಜ್ಯೋತಿ, ಸರಸ್ವತಿ,ಅಕ್ಕಮ್ಮ, ಶಕುಂತಲಾ, ಲಕ್ಷ್ಮೀ, ಶ್ರೀದೇವಿ, ರುಕ್ಮಿಣಿ, ಅಂಬಿಕಾ, ಕಲಾವತಿ, ಗಂಗಮ್ಮ, ರಾಜಪ್ಪ ಗುನ್ನಳ್ಳಿ, ಶಕ್ತಿಕಾಂತ್ ಭಾವಿದೊಡ್ಡಿ, ಕಪಿಲ್ ಗೋಡಬೋಲೆ, ಮಲ್ಲಿಕಾರ್ಜುನ್ ಮೊಳಕೆರೆ ಹಾಗೂ ಸುಬ್ಬಣ್ಣ ಕರಕನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






