ಬೀದರ್ | ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದ ವಕೀಲನಿಗೆ ಜೀವಾವಧಿ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ಬೀದರ್ : ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರಿಗೆ ಶೂ ಎಸೆದು ಅವಮಾನ ಮಾಡಿದ ಹಾಗೂ ಅಂಬೇಡ್ಕರ್ ಅವರ ವಿರುದ್ಧ ಹಗುರವಾಗಿ ಮಾತನಾಡಿ ಅವಮಾನ ಮಾಡಿದ ಅನಿಲ್ ಮಿಶ್ರಾ ಎನ್ನುವ ವಕೀಲನ ವಿರುದ್ಧ ದೇಶದ್ರೋಹದಡಿಯಲ್ಲಿ ಪ್ರಕರಣ ದಾಖಲಿಸಿ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಇಂದು ಹುಲಸೂರ್ ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಹುಲಸೂರಿನ ಪ್ರಮುಖ ರಸ್ತೆಗಳಲ್ಲಿ ವಕೀಲರ ವಿರುದ್ಧ ಘೋಷಣೆ ಕೂಗುತ್ತಾ, ವಕೀಲರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬುದ್ಧ ಮತ್ತು ಡಾ.ಅಂಬೇಡ್ಕರ್ ಅನುಯಾಯಿ ಮತ್ತು ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದ್ದಾರೆ. ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭದ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಈ ಶೂ ಎಸೆದಿರುವ ಘಟನೆ ಸಾಕ್ಷಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಮನುವಾದದ ಪ್ರವರ್ತಕರು ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಶೂ ಎಸೆದಿದ್ದಾರೆ. ಇದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ, ನ್ಯಾಯದ ಮತ್ತು ಸಂವಿಧಾನದ ಮೇಲಿನ ದಾಳಿಯಾಗಿದೆ. ಇದು ಕೇವಲ ಶೂ ದಾಳಿಯಲ್ಲ, ಮನುವಾದದ ಮತಾಂಧರು ನಡೆಸಿದ ಸಂವಿಧಾನದ ಮೌಲ್ಯಗಳ ಮೇಲಿನ ಭಯೋತ್ಪಾದಕ ದಾಳಿಯಾಗಿದೆ ಎಂದು ಆರೋಪಿಸಲಾಗಿದೆ.
ಸಂವಿಧಾನದ ಮೇಲೆ ಮನುವಾದಿಗಳಿಗೆ ಇರುವ ಅಸಹನೆಗೆ ಹಾಗೂ ದೇಶದ ಅತ್ಯುನ್ನತ ಆಸ್ಥಾನದಲ್ಲಿದ್ದರೂ ಶೋಷಿತರ ಶೋಷಣೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. ಸಂವಿಧಾನ ಅಪಾಯದಲ್ಲಿದೆ ಎಂಬ ನಮ್ಮ ಆತಂಕಕ್ಕೆ ಇಂದು ನೇರ ಪುರಾವೆ ಸಿಕ್ಕಿದೆ. ದೇಶದ ಇತಿಹಾಸದಲ್ಲಿ ಎಂದೂ ನಡೆಯದ ಈ ಮಾದರಿಯ ಕೃತ್ಯ ಈಗ ನಡೆದಿದೆ. ಮನುವಾದಿಗಳ ಈ ಕಪ್ಪು ಚುಕ್ಕೆಯನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ಸಿಜೆಐ ಬಿ.ಆರ್ ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕಿವೆ. ಈ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಈ ಘಟನೆಯನ್ನು ಒಕ್ಕೋರಲಿನಿಂದ ಖಂಡಿಸಬೇಕು ಎಂದು ಆಗ್ರಹಿಸಲಾಗಿದೆ.
ಶೂ ಎಸೆದು ಅವಮಾನಿಸಿರುವ ವಕೀಲನ ಮೇಲೆ ಹಾಗೂ ಗ್ವಾಲಿಯರ್ ನಲ್ಲಿ ಡಾ.ಅಂಬೇಡ್ಕರ್ ಅವರ ಬಗ್ಗೆ, ಹಗುರವಾಗಿ ಮಾತನಾಡಿ ಅವಮಾನಿಸಿರುವ ಅನೀಲ್ ಮಿಶ್ರಾ ಎಂಬ ವಕೀಲನ ಮೇಲೆ ಕೇಂದ್ರ ಸರ್ಕಾರ ಸ್ವಯಂ ಪ್ರೇರಣೆಯಿಂದ ದೇಶದ್ರೋಹದ ಪ್ರಕರಣ ದಾಖಲಿಸಿ, ಜೀವಾವಧಿ ಶಿಕ್ಷೆ ಒದಗಿಸಬೇಕು. ತಪ್ಪಿತಸ್ಥ ವ್ಯಕ್ತಿಯ ವಕೀಲರ ಸಂಘದಲ್ಲಿರುವ ಸದಸ್ಯತ್ವವನ್ನು ಖಾಯಂ ಆಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ಬೌಧ ಮಹಾಸಭಾದ ಕಾರ್ಯದರ್ಶಿ ವಿದ್ಯಾಸಾಗರ್ ಬನಸೂಡೆ, ಗ್ರಾಮ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಸಂದೀಪ್ ಎಮ್. ಮುಕಿಂದೆ, ಭಾರತೀಯ ಬೌಧ ಮಹಾಸಭಾದ ಮಹಿಳಾ ಘಟಕ ಅಧ್ಯಕ್ಷೆ ಶಾಲುಬಾಯಿ ಬನಸೂಡೆ, ಡಿಎಸ್ಎಸ್ ತಾಲೂಕು ಸಂಚಾಲಕ ದೇವಾನಂದ್ ತೊಳೆ, ವಾಯ್ಸ್ ಆಫ್ ಅಂಬೇಡ್ಕರ್ ಸಂಘಟನೆಯ ಸುರೇಶ್ ಮೋರೆ, ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಲೊಕೇಶ ಕಾಂಬಳೆ, ಭೀಮ್ ಅರ್ಮಿಯ ತಾಲೂಕು ಅಧ್ಯಕ್ಷ ಚೇತನ್ ಕಾಡೆ, ಬಿಎಸ್ಪಿ ತಾಲೂಕು ಅಧ್ಯಕ್ಷ ಶಂಕರ್ ಫುಲೆ, ವಿನೋದ್ ಶಿಂದೆ ಹಾಗೂ ಅಂಬ್ರೆಷ್ ಶಿಂದೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.







