ಬೀದರ್ | ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

ಬೀದರ್ : ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಪ್ರತಿಭಟನೆ ನಡೆಸಿತು.
ಇಂದು ನೂರಾರು ಸಂಖ್ಯೆಯ ಜನರು ನಗರದ ಶಾಹಗಂಜ್ ನ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಛಲವಾದಿ ನಾರಾಯಣಸ್ವಾಮಿ ಹಾಗೂ ಎನ್.ರವಿಕುಮಾರ್ ಅವರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಮೂಲಕ ಸಾಗಿದರು.
ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಂಬೇಡ್ಕರ್ ವಾದಿ ಪ್ರಿಯಾಂಕ್ ಖರ್ಗೆ ಅವರು ಮನುವಾದಿ, ಬಿಜೆಪಿ ಹಾಗೂ ಆರ್.ಎಸ್.ಎಸ್ ನ ಕೋಮುವಾದಿ ಸಂಘಪರಿವಾರದವರನ್ನು ವಿಧಾನಸೌಧದ ಒಳಗೆ ಹಾಗೂ ಹೊರಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಅವರು ಸಾರ್ವಜನಿಕವಾಗಿ ಕೇಳಿರುವ ಸಂವಿಧಾನ ಬದ್ಧವಾದ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರ ನೀಡುವ ನೈತಿಕ ಸಾಮರ್ಥ್ಯವಿಲ್ಲದ ಮನುವಾದಿಗಳು ತಮ್ಮ ಕೊನೆಯ ಅಸ್ತ್ರವಾಗಿ ವೈಯಕ್ತಿಕ ನಿಂದನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಲಾಗಿದೆ.
ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ರ‍್ಯಾಲಿ ಒಂದರಲ್ಲಿ ಎನ್.ರವಿಕುಮಾರ್ ಅವರು ಕಲಬುರಗಿ ಜಿಲ್ಲಾಧಿಕಾರಿಗಳಾದ ಫೌಝಿಯಾ ತರುನ್ನುಮ್ ಅವರು ಪಾಕಿಸ್ತಾನದಿಂದ ಬಂದವರಂತೆ ಕಾಣುತ್ತದೆ ಎಂದು ಅಗೌರವದಿಂದ ಅಸಂವಿಧಾನ ಪದವನ್ನು ಬಳಸಿ, ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರ ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದು ಇಂಥ ನಡುವಳಿಕೆ ಸರಿಯಲ್ಲ. ಹಾಗಾಗಿ ಈ ಕೂಡಲೇ ಇವರನ್ನು ವಿಧಾನ ಪರಿಷತ್ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಚಾಲಕ ಅರುಣ ಪಟೇಲ್, ಜಿಲ್ಲಾ ಸಂ. ಸಂಚಾಲಕರಾದ ರಾಜಕುಮಾರ್ ವಾಘಮಾರೆ, ಅಶೋಕ್ ಗಾಯಕವಾಡ್, ವಾಮನ್ ಮೈಸಲಗೆ, ರಮೇಶ್ ಬೆಲ್ದಾರ್, ಸತೀಶ್ ರತ್ನಾಕರ್, ಝರೇಪ್ಪಾ ವರ್ಮಾ, ಶಿರೋಮಣಿ ಹಲಗೆ, ರಾಹುಲ್ ಹಾಲಹಿಪ್ಪರ್ಗಾ, ವಿನೋದ ಬಂದಗೆ, ವಿಜಯಕುಮಾರ ಭಾವಿಕಟ್ಟೆ, ವಿಠಲದಾಸ್ ಪ್ಯಾಗೆ, ಶಿವಕುಮಾರ್ ಗುನ್ನಳ್ಳಿ, ಪಂಡಿತರಾವ್ ಚಿದ್ರಿ, ಅಬ್ದುಲ್ ಮನ್ನಾನ್ ಸೇಠ್, ಬಾಬು ಟೈಗರ್, ಮಹೇಶ್ ಗೋರನಾಳಕರ್, ವಿನಯ್ ಮಾಳಗೆ, ಅಭಿ ಕಾಳೆ ಹಾಗೂ ಬಸವರಾಜ್ ಅಲಿಯಂಬರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.