ಬೀದರ್ | ವಿಬಿ-ಜಿ ರಾಮ್ ಜಿ ಯೋಜನೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

ಬೀದರ್ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮನರೇಗಾ ಕಾಯ್ದೆಯ ಹಕ್ಕುಸ್ವರೂಪವನ್ನು ತೆಗೆದುಹಾಕಿ, ಕೇವಲ ಸರ್ಕಾರದ ಆಣತಿಯ ಯೋಜನೆಯಾಗಿ ಬದಲಾಯಿಸಿರುವುದನ್ನು ಖಂಡಿಸಿ, ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ, ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸಿದ್ದು, ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರರು ಹಾಗೂ ಬಡ ರೈತರು ತಮ್ಮ ಜೀವನೋಪಾಯಕ್ಕಾಗಿ ಈ ಕಾಯ್ದೆಯ ಮೇಲೆ ಅವಲಂಬಿತರಾಗಿದ್ದರು ಎಂದು ತಿಳಿಸಲಾಗಿದೆ. ಆದರೆ 2025ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆಯನ್ನು ರದ್ದುಗೊಳಿಸಿ, ಸರ್ಕಾರದ ಆಣತಿಯಂತೆ ನಡೆಯುವ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಆರೋಪಿಸಲಾಗಿದೆ.
ಈ ಹೊಸ ಕಾಯ್ದೆಯಿಂದ ಕೃಷಿ ಋತುವಿನಲ್ಲಿ 60 ದಿನಗಳ ಕೆಲಸ ನಿರ್ಬಂಧಿತವಾಗಿದ್ದು, 125 ದಿನಗಳ ಉದ್ಯೋಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೂಲಿಕಾರರು ಕೆಲಸದಿಂದ ವಂಚಿತರಾಗುವಂತಾಗಿದೆ ಎಂದು ದೂರಲಾಗಿದೆ. ಜೊತೆಗೆ, ಯಂತ್ರ ಬಳಕೆ ಮತ್ತು ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸುವ ಅಂಶಗಳು ಈ ಯೋಜನೆಯಲ್ಲಿ ಸೇರಿರುವುದರಿಂದ, ಕೂಲಿಕಾರರಿಗೆ ಕೆಲಸದ ದಿನಗಳು ಕಡಿಮೆಯಾಗುವ ಹಾಗೂ ಗುತ್ತಿಗೆದಾರರಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಹೊಸ ಕಾಯ್ದೆಯಡಿ ಹಣಕಾಸಿನ ಭಾರವನ್ನು ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರ ಅನುಪಾತದಲ್ಲಿ ಭರಿಸಬೇಕು ಎನ್ನಲಾಗಿದ್ದು, ಕೇಂದ್ರ ಸರ್ಕಾರ ಸೂಚಿಸುವ ಕೆಲಸಗಳನ್ನು ಮಾತ್ರ ಮಾಡಬೇಕಾದ ಪರಿಸ್ಥಿತಿ ಇದೆ. ಇವೆಲ್ಲವನ್ನು ಗಮನಿಸಿದರೆ ಕೃಷಿ ಹಾಗೂ ಗ್ರಾಮೀಣ ಕೂಲಿಕಾರರನ್ನು ಉದ್ಯೋಗದಿಂದ ಹೊರಗಿಡುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಸಂಘ ಆರೋಪಿಸಿದೆ.
ಆದ್ದರಿಂದ 2025ರ ಕಾಯ್ದೆ ಬದಲಾವಣೆ ಕೈಬಿಟ್ಟು, ಹಳೆಯ ಮನರೇಗಾ ಕಾಯ್ದೆಯನ್ನೇ ಮುಂದುವರಿಸಬೇಕು ಎಂದು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘವು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಇಸಾಮೋದ್ದಿನ್ ಮೀರಾಸಾಬ್, ಕಾರ್ಯದರ್ಶಿ ಅಂಬುಬಾಯಿ ಮಾಳಗೆ, ಸಹ ಕಾರ್ಯದರ್ಶಿ ದೇವಾನಂದ ಗಾಯಕವಾಡ್, ಹುಮನಾಬಾದ್ ತಾಲೂಕು ಅಧ್ಯಕ್ಷ ಸೂರ್ಯಕಾಂತ್, ಮುಖಂಡರಾದ ಲಖನ್ ಮಹಾಜನ್, ಪ್ರಭು, ಕಾಸಿಬಾಯಿ ಹುಣಸಗೇರಾ, ಕಂಟೆಪ್ಪಾ, ಶ್ರೀಮಂತ್, ಶಶಿಕಲಾ, ಹುಸೈನ್, ಗಣಪತಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







