ಬೀದರ್ | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರ ಪ್ರತಿಭಟನೆ

ಬೀದರ್ : ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎಯುಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರು ಫೆಡರೇಷನ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, 2025-26 ರ ಬಜೆಟ್ ನಲ್ಲಿ ವೇತನ ಹೆಚ್ಚಳ ಮಾಡುವುದು, ಇಡಗಂಟು ಹಣವನ್ನು ಹೆಚ್ಚಿಸುವುದು ಸೇರಿದಂತೆ ಇನ್ನು ಇತರ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಲಾಯಿತು.
ಪ್ರಿಯಾಂಕಾ ಗಾಂಧಿ ಅವರು, ನೀಡಿರುವ ಭರವಸೆಯಂತೆ ಬಿಸಿಯೂಟ ತಯಾರಕರಿಗೆ ಮಾಸಿಕ ವೇತನ 6 ಸಾವಿರ ರೂ. ಗೆ ಏರಿಸಬೇಕು. ನಿವೃತ್ತರಾದ ಬಿಸಿಯೂಟ ತಯಾರಕರಿಗೆ ಇಡುಗಂಟು ಹಣವನ್ನು ಕನಿಷ್ಠ 2 ಲಕ್ಷ ರೂ. ವರೆಗೆ ನೀಡಬೇಕು. ಕುಕ್ಕರ್ ಸ್ಫೋಟ ಮತ್ತು ಯಾವುದೇ ರೀತಿಯ ಅವಘಡಗಳು ಸಂಭವಿಸಿದ್ದಲ್ಲಿ ಚಿಕಿತ್ಸೆಗಾಗಿ ಕನಿಷ್ಠ 50 ಸಾವಿರ ರೂ. ನೀಡಬೇಕು. ಹಾಗೆಯೇ 1972ರ ಕಾರ್ಮಿಕ ಕಾಯ್ದೆಯಂತೆ ನಿವೃತ್ತಿ ಹೊಂದುವ ಎಲ್ಲ ಬಿಸಿಯೂಟ ತಯಾರಿಕರಿಗೂ ಉಪಧನ ಜಾರಿಗೊಳಿಸಿ, ಮೊಟ್ಟೆ ಸುಲಿಯುವ ಭತ್ತವೂ ಹೆಚ್ಚು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರು ಫೆಡರೇಷನ್ (ಎಯುಟಿಯುಸಿ ಸಂಯೋಜಿತ) ಜಿಲ್ಲಾಧ್ಯಕ್ಷ ಶಾಂತಕುಮಾರ್ ಶೇರಿಕಾರ್, ಗೌರವ ಅಧ್ಯಕ್ಷ ಬಾಬುರಾವ್ ಹೊನ್ನಾ, ಉಪಾಧ್ಯಕ್ಷ ಕಾಶೀನಾಥ್ ಕಡೆದೊಡ್ಡಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಮುಗನೂರೆ, ವಿಜಯಲಕ್ಷ್ಮಿ, ಲಕ್ಷ್ಮಿಬಾಯಿ, ಸುಜಾತಾ ಮಾಳೆಗಾಂವ್, ಸುಂದರ್ ಮೇಲ್ದೊಡ್ಡಿ, ಚಂದ್ರಶೇಖರ್ ಮಾಲಿಪಾಟೀಲ್, ಶಾಂತಕುಮಾರ್, ರವೀಂದ್ರ ನಲಕಂಟೆ ಹಾಗೂ ಪ್ರಭಾವತಿ ಮೀನಕೇರಾ ಸೇರಿದಂತೆ ನೂರಾರು ಬಿಸಿಯೂಟ ತಯಾರಕರು ಭಾಗವಹಿಸಿದ್ದರು.







