Bidar |ಬಸವಾದಿ ಶಿವಶರಣರ ಹಿಂದೂ ಸಮಾವೇಶ ವಿರೋಧಿಸಿ ಜೂ.28ರಂದು ಪ್ರತಿಭಟನೆ: ಡಾ.ಮೀನಾಕ್ಷಿ ಬಾಳಿ

ಬೀದರ್ : ಜೂ.28ರಂದು ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ವಿರೋಧಿಸಿ ಜಾಗತಿಕ ಲಿಂಗಾಯತ ಮಹಾಸಭೆ, ಸೌಹಾರ್ದ ಕರ್ನಾಟಕ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಚಿಂತಕಿ ಡಾ.ಮೀನಾಕ್ಷಿ ಬಾಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಅಂತರ್ಜಾತಿ ವಿವಾಹವನ್ನು ಬೆಂಬಲಿಸಿದ ಕಾರಣಕ್ಕೆ ಬಸವಣ್ಣ ಹಾಗೂ ಶರಣರನ್ನು ಅಂದಿನ ಸನಾತನವಾದಿಗಳು ಹಿಂಸೆಗೆ ಒಳಪಡಿಸಿದ್ದರು. ಈಗ ಅದೇ ಸನಾತನವಾದಿಗಳು ಬಸವಾದಿ ಶಿವಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸುತ್ತಿರುವುದು ಖಂಡನೀಯ ಎಂದು ಹೇಳಿದರು.
ಬಸವಾದಿ ಶರಣರ ತತ್ವಗಳು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಆದರೆ, ಸನಾತನ ತತ್ವಗಳು ವರ್ಣಾಶ್ರಮ, ಜಾತಿ ಹಾಗೂ ಲಿಂಗ ತಾರತಮ್ಯವನ್ನು ಸಮರ್ಥಿಸುತ್ತವೆ. ಹೀಗಾಗಿ ಶರಣರ ತತ್ವಗಳಿಗೆ ವಿರುದ್ಧವಾದ ಚಿಂತನೆಗಳನ್ನು ಬಸವಣ್ಣನವರ ಹೆಸರಿನಲ್ಲಿ ಪ್ರಚಾರ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಈ ಸಮಾವೇಶದ ಹಿಂದೆ ಆರ್‌ಎಸ್‌ಎಸ್‌ನ ಪ್ರಭಾವವಿದೆ ಎಂದು ಆರೋಪಿಸಿದ ಅವರು, ಕಳೆದ ಹಲವು ವರ್ಷಗಳಿಂದ ಲಿಂಗಾಯತ ಧರ್ಮದ ತತ್ವಗಳನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿವೆ. ಜೂನ್ 28ರಂದು ಬಸವಕಲ್ಯಾಣದಲ್ಲಿ ತಾತ್ವಿಕ ಹೋರಾಟದ ಮೂಲಕ ಸಮಾವೇಶವನ್ನು ಧಿಕ್ಕರಿಸಲಾಗುವುದು ಎಂದು ಎಚ್ಚರಿಸಿದರು.
ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಲಿಂಗಾಯತ ಧರ್ಮವು ಸಮಾನತೆಯ ಸಂದೇಶ ಸಾರುವ ಸ್ವತಂತ್ರ ತತ್ವವಾಗಿದ್ದು, ಅದನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಕೆ. ನೀಲಾ ಮಾತನಾಡಿ, ಲಿಂಗಾಯತವು ಜಾತಿಯಲ್ಲ, ಅದು ಸಮಾನತೆಯನ್ನು ಪ್ರತಿಪಾದಿಸುವ ತತ್ವವಾಗಿದೆ. ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ಒಪ್ಪದ ಮನೋಭಾವದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾರುತಿ ಗೋಖಲೆ, ಶಶಿಕಾಂತ್, ಸಾವಿತ್ರಿ, ಬಸವರಾಜ್ ಮಾಳಗೆ, ಗೌಸುದ್ದೀನ್, ರಾಜಾಸಾಬ್, ಟಿ. ಧನರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಮ್ಮ ಹೋರಾಟ ಕನ್ನೇರಿ ಸ್ವಾಮೀಜಿ ವಿರುದ್ಧವಲ್ಲ; ಆರೆಸ್ಸೆಸ್ ಚಿಂತನೆ ವಿರುದ್ಧ
ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಬಸವಾದಿ ಶಿವಶರಣರ ಹಿಂದೂ ಸಮಾವೇಶದ ಹಿಂದೆ ಸಂಘ ಪರಿವಾರದ ಚಿಂತನೆಗಳಿವೆ. ನಮ್ಮ ಹೋರಾಟ ವ್ಯಕ್ತಿಗಳ ವಿರುದ್ಧವಲ್ಲ, ತಾತ್ವಿಕವಾಗಿ ಆರ್‌ಎಸ್‌ಎಸ್ ಚಿಂತನೆಯ ವಿರುದ್ಧವಾಗಿದೆ. ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ಉಳಿಸಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು.






