ಬೀದರ್ | ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನಾ ರ‍್ಯಾಲಿ

ಬೀದರ್ : ಜಿಲ್ಲೆಯ ಬಗದಲ್ ಗ್ರಾಮದಲ್ಲಿ ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ಪ್ರತಿಭಟನಾ ರ‍್ಯಾಲಿಯು ಶುಕ್ರವಾರ ಬಗದಲ್ ನಗರದ ಪ್ರಮುಖ ರಸ್ತೆಗಳ ಮೂಲಕ ನಾಡ ತಹಶೀಲ್ದಾರ್ ಕಚೇರಿಗೆ ಆಗಮಿಸಿತು. ನಾಡ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಧೀಶರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ವಕ್ಫ್ ತಿದ್ದುಪಡಿ ಕಾಯಿದೆಯನ್ನು ಹಿಂಪಡೆಯಲು ಆಗ್ರಹಿಸುತ್ತೇವೆ. ಈ ಕಾಯಿದೆಯು ವಕ್ಫ್ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರುವಂತಹ ನಿಬಂಧನೆಗಳನ್ನು ಒಳಗೊಂಡಿದೆ. ಹಾಗೆಯೇ ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ದತ್ತಿ ಆಸ್ತಿಗಳನ್ನು ನಿರ್ವಹಿಸುವ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವಕ್ಫ್ ಮಾಲಕತ್ವವನ್ನು ನಿರ್ಧರಿಸಲು ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡುವುದು. ವಕ್ಫ್ ಬೋರ್ಡ್‌ಗಳಲ್ಲಿ ಮುಸ್ಲಿಮೇತರರನ್ನು ಅನುಮತಿಸುವ ಮೂಲಕ ವಕ್ಫ್ ಆಸ್ತಿಗಳ ಮೇಲೆ ಬೇರೆಯವರು ಹಿಡಿತ ಸಾಧಿಸುವುದು ನಮಗೆ ಸ್ವೀಕಾರಾರ್ಹವಲ್ಲ. ಈ ಬದಲಾವಣೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ. ವಿಶೇಷವಾಗಿ 25 ರಿಂದ 30ನೇ ವಿಧಿ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕು ಮತ್ತು ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಸ್ಥೆಗಳ ಸವೆತಕ್ಕೆ ಕಾರಣವಾಗಬಹುದಾಗಿದೆ. ಇಂತಹ ತಿದ್ದುಪಡಿ ಜಾರಿಗೆ ಬಂದರೆ, ಸಮುದಾಯ ಮತ್ತು ರಾಜ್ಯದ ನಡುವಿನ ನಂಬಿಕೆ, ಸೌಹಾರ್ದತೆಗೆ ದೀರ್ಘಕಾಲೀನ ಹಾನಿ ಉಂಟು ಮಾಡುತ್ತದೆ ಎದು ತಿಳಿಸಿದ್ದಾರೆ.
ನ್ಯಾಯ, ಸಾಂವಿಧಾನಿಕ ಮೌಲ್ಯಗಳು ಮತ್ತು ಕೋಮು ಸೌಹಾರ್ದದ ಹಿತದೃಷ್ಟಿಯಿಂದ, ಈ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಮತ್ತು ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಾವು ರಾಷ್ಟ್ರಪತಿ ಮತ್ತು ನ್ಯಾಯಾಂಗಕ್ಕೆ ಮನಃಪೂರ್ವಕವಾಗಿ ಒತ್ತಾಯಿಸುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಮುಹಮ್ಮದ್ ಫಿರೋಜ್ ಖಾನ್, ಇಮ್ರಾನ್ ಖಾನ್, ಬಶಿರ್ ಸುಧಾಗರ್ ಹಾಗೂ ಮುಹಮ್ಮದ್ ಹಬೀಬ್ ಸೇರಿದಂತೆ ಹಲವು ಮುಖಂಡರು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.







