ಬೀದರ್ | ದಲಿತರ ಭೂಮಿ-ವಸತಿ ಹಕ್ಕಿಗಾಗಿ ಆಗ್ರಹಿಸಿ ಪ್ರತಿಭಟನಾ ಧರಣಿ

ಬೀದರ್ : ದಲಿತರ ಭೂಮಿ, ವಸತಿ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಬಸವಕಲ್ಯಾಣ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.
ಬಸವಕಲ್ಯಾಣ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಪರಿಶಿಷ್ಟ ಜಾತಿ, ವರ್ಗ ಹಾಗೂ ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ (ದರಖಾಸ್ತು ಮಂಜೂರಾತಿ ಸಕ್ರಮೀಕರಣ) ಕಾಲಮಿತಿಯೊಳಗಾಗಿ ಇತ್ಯರ್ಥಗೊಳಿಸಬೇಕು. ವಿನಾಕಾರಣ ವಜಾಗೊಳಿಸಿರುವ ಬಗರ್ ಹುಕುಂ ಸಾಗುವಳಿಯ ಅರ್ಜಿಗಳನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಬೀದರ್ ಜಿಲ್ಲೆಯ ಹಲವಾರು ಕಡೆಗೆ ದಲಿತರ ಜಮೀನು ವಶಕ್ಕೆ ಪಡೆಯುವ ಕೆಲಸ ಪ್ರಾರಂಭವಾಗಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು. ಎಸ್‌ಸಿಎಸ್‌ಪಿ, ಟಿಎಸ್‌ಪಿ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಾಲಯ ಅಥವಾ ಏಕ ಗವಾಕ್ಷಿ ಯೋಜನೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಗಿ, ಬಸವಕಲ್ಯಾಣ ತಾಲೂಕು ಪ್ರಧಾನ ಸಂಚಾಲಕ ಮಹಾದೇವ್ ಗಾಯಕವಾಡ್, ಪ್ರಶಾಂತ್ ಶಿಂದೆ, ಡಾ. ಜಿಯಾವುದ್ದೀನ್ ನೀಲಂಗೆಕರ್, ರಾಜು ಸೂರ್ಯವಂಶಿ, ಮನೋಜ್ ಖೇಲೆ, ಆಕಾಶ್, ಸಿದ್ದಾರ್ಥ್ ಶಿಂದೆ ಹಾಗೂ ರೋಹಿತ್ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







