ಬೀದರ್ | ಅರ್ಹ ರೈತ, ವಿದ್ಯಾರ್ಥಿಗಳಿಗೆ ಸಾಲ ನೀಡಿ : ಸಂಸದ ಸಾಗರ್ ಖಂಡ್ರೆ

ಬೀದರ್ : ಎಲ್ಲ ಅರ್ಹ ರೈತ ಹಾಗೂ ವಿದ್ಯಾರ್ಥಿಗಳಿಗೆ ಸಾಲ ನೀಡಬೇಕು ಎಂದು ಸಂಸದ ಸಾಗರ್ ಖಂಡ್ರೆ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲೆಯ ಜಿಲ್ಲಾ ಸಮನ್ವಯ ಸಮಿತಿ ಮತ್ತು ಜಿಲ್ಲಾ ಮಟ್ಟದ ಪರಾಮರ್ಶಾ ಸಮಿತಿ ಸಭೆಯಲ್ಲಿ ಕೃಷಿ ಸಾಲ, ಬೆಳೆ ಸಾಲ, ಶಿಕ್ಷಣ ಸಾಲ ಮತ್ತು ಉದ್ಯೋಗ ಆಧಾರಿತ ಸಾಲಗಳ ಕುರಿತು ಅವರು ಮಾತನಾಡಿದರು.
ರೈತರಿಗೆ ನೀಡಿರುವ ಬೆಳೆ ಸಾಲಗಳನ್ನು ಪರಿಶೀಲನೆ ನಡೆಸಿ, ಎಲ್ಲಾ ಅರ್ಹ ರೈತರಿಗೆ ಕೃಷಿ ಸಾಲ ನೀಡಬೇಕು. ಶಿಕ್ಷಣ ಸಾಲಗಳ ಕುರಿತು ಆರ್ ಬಿ ಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಿದ್ಯಾರ್ಥಿಗಳಿಗೆ ಜಾಮಿನಿಲ್ಲದೆ ಶಿಕ್ಷಣ ಸಾಲ ನೀಡುವಂತೆ ಆದೇಶಿಸಿದರು.
ಕೆಲ ಬ್ಯಾಂಕುಗಳು ಬೆಳೆ ಸಾಲದ ಗುರಿ ತಲುಪಲು ವಿಫಲವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪಿಎಂಇಜಿಪಿ ಯೋಜನೆಯಡಿ ಉದ್ಯಮ ಸಾಲಗಳ ಅನುಮೋದನೆಯ ಗುರಿಯಂತೆ ಪೂರೈಸಲು ಸೂಚಿಸಿದರು.
ಮೆಹಕರನಲ್ಲಿ ಎಸ್‍ಬಿಐ ಶಾಖೆ ಮತ್ತು ಔರಾದ್ ಪಟ್ಟಣದಲ್ಲಿ ಹೆಚ್ಚುವರಿ ಶಾಖೆ ತೆರೆಯುವ ಸಾಧ್ಯತೆಗಳ ಕುರಿತು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ರೈತರು, ವಿದ್ಯಾರ್ಥಿಗಳು, ಹಾಗೂ ಯುವ ಉದ್ಯಮಿಗಳಿಗೆ ಅಗತ್ಯವಿರುವ ಹಣಕಾಸು ನೆರವನ್ನು ಸುಗಮವಾಗಿ ಒದಗಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಡಾ. ಗಿರೀಶ್ ಬದೋಲೆ ಸೇರಿದಂತೆ ವಿವಿಧ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.







