ಬೀದರ್ | ಅತಿವೃಷ್ಟಿಯಿಂದ ಹಾಳಾದ ಪ್ರತಿ ಎಕರೆ ಭೂಮಿಗೆ 50 ಸಾವಿರ ರೂ. ಪರಿಹಾರ ಒದಗಿಸಿ : ಈಶ್ವರ್ ಸಿಂಗ್ ಠಾಕುರ್

ಬೀದರ್ : ಜಿಲ್ಲೆಯಲ್ಲಿ ಇತ್ತೀಚಿಗೆ ಭಾರಿ ಮಳೆಯಿಂದಾಗಿ ರೈತರು ಬೆಳೆದ ಬಹುತೇಕ ಬೆಳೆಯು ಹಾನಿಯಾಗಿದ್ದು, ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಒದಗಿಸಬೇಕು ಎಂದು ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕುರ್ ಅವರು ಒತ್ತಾಯಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಬೀದರ್ ವಿಧಾನಸಭಾ ಮತ ಕ್ಷೇತ್ರದ ಗ್ರಾಮಗಳಿಗೆ ಭೇಟಿ ಕೊಟ್ಟಾಗ ರೈತರ ಬಹುತೇಕ ಎಲ್ಲ ಬೆಳೆಗಳ ನಾಶವಾಗಿದೆ. ಹಾಗೆಯೇ ಮನೆ ಬಿದ್ದಿರುವುದು ಹಾಗೂ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಕಣ್ಣಾರೆ ನೋಡಿದ್ದೇವೆ ಎಂದು ತಿಳಿಸಿದರು.
ಇಸ್ಲಾಂಪುರ್, ಸಾಂಗ್ವಿ, ಬಂಪಳ್ಳಿ, ಜಾಂಪಾಡ, ಅಲ್ಲಾಪುರ್, ಚಿಲ್ಲರ್ಗಿ, ಚಿಮಕೋಡ್, ಚಾಂಬೋಳ್, ಹಿಪ್ಪಳಗಾಂವ್, ಕನ್ನಳ್ಳಿ ಹಾಗೂ ಮಾಳೆಗಾಂವ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆಯು ಸಂಪೂರ್ಣವಾಗಿ ನಾಶವಾಗಿದೆ. ರೈತರು ತಮ್ಮ ಹೊಲ ಎಲ್ಲಿದೆ ಎಂದು ಹುಡುಕಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಸಹಿತ ಕೆಲವು ಕಡೆಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಹಾಗೆಯೇ ಇದೆ ಎಂದರು.
ನಾವು 8 ದಿನ ಗಡುವು ನೀಡುತ್ತಿದ್ದು, ಗಡುವಿನ ಅವಧಿಯಲ್ಲಿ ರೈತರ ಹಾನಿಗೊಳಗಾದ ಭೂಮಿಯನ್ನು ಸಮೀಕ್ಷೆ ನಡೆಸಿ, ಎಕರೆಗೆ 50 ಸಾವಿರ ರೂ. ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ರೈತರ ಜೊತೆಗೂಡಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಾಬು ವಾಲಿ, ಶಶಿಕಾಂತ್ ಹೊಸಳ್ಳಿ, ದೀಪಕ್ ಗಾದಗಿ, ರಾಜೇಂದ್ರ ಪೂಜಾರಿ, ನಿಜಲಿಂಗಪ್ಪ ಹಾಗೂ ನಾಗೇಂದ್ರ ಪಾಟೀಲ್ ಸೇರಿದಂತೆ ಇತರರು ಇದ್ದರು.







