ಬೀದರ್ | ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಎಸ್ಐಆರ್ ಕುರಿತು ಜನಜಾಗೃತಿ

ಹುಮನಾಬಾದ್ : ಸಂವಿಧಾನದ ಆಸಯದಂತೆ ಭದ್ರವಾದ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣ ಮಾಡುವುದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹೇಳಿದರು.
ನಗರದ ಬಸವರಾಜ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ನಡೆದ ಎಸ್ಐಆರ್ ಕುರಿತು ಜನಜಾಗೃತಿ ಮತ್ತು ತರಬೇತಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಗರದಲ್ಲಿ ವಾರ್ ರೂಮ್ ನಿರ್ಮಿಸಬೇಕು. ಅದರಿಂದಲೇ ಮತಪಟ್ಟಿ ಪರಿಷ್ಕರಣೆಯ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಜಾಗೃತರಾಗಿ ಕೆಲಸ ಮಾಡಬೇಕು ಎಂದರು.
ಕಾರ್ಯಕರ್ತರು ಪಕ್ಷದ ನಿಜವಾದ ಸಂಪತ್ತು. ಕಾರ್ಯಕರ್ತರಿಂದಲೇ ಬಲಿಷ್ಠ ಸಂಘಟನೆ ಹೊಂದಲು ಸಾಧ್ಯವಾಗುತ್ತದೆ. ಈ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾರು ಚುರುಕಾಗಿ ಉತ್ತಮ ಕೆಲಸ ಮಾಡುತ್ತಾರೆ ಅವರನ್ನು ಗುರುತಿಸಿ, ಒಳ್ಳೆಯ ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.
ಹುಮನಾಬಾದ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮವಾದ ಯೋಜನೆಗಳು ಬಂದಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ಹಿಂದೆ ನಡೆದ ಚುನಾವಣೆಯಲ್ಲಿ ನಮ್ಮವರು ಜಾಗೃತರಾಗಿ ಕೆಲಸ ಮಾಡಿದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಇಂದು ಸಚಿವನಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ತರುತ್ತಿದ್ದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ್ ಅವರು ಮಾತನಾಡಿ, ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇರಲಿಲ್ಲ ಎಂದರೆ ನಮ್ಮ ಪೌರತ್ವ ರದ್ದಾಗುತ್ತದೆ. ಸರಕಾರದ ಯೋಜನೆ, ಇತರೆ ಸೌಲಭ್ಯ ಪಡೆಯಲು ಅನರ್ಹರಾಗುತ್ತೇವೆ. ಹೀಗಾಗಿ ಒಂದು ತಿಂಗಳ ಕಾಲ ನಿರಂತರ ನಡೆಯುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಾಗೃತರಾಗಿ ಮತದಾರ ಪಟ್ಟಿಗೆ ತಮ್ಮ ಹೆಸರು ಸೇರಿಸಬೇಕು ಎಂದು ತಿಳಿದರು.
ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠಲದಾಸ್ ಪ್ಯಾಗೆ ಅವರು ಮಾತನಾಡಿ, ಎಸ್ಐಆರ್ ಮೂಲಕ ರಕ್ತಪಾತವಿಲ್ಲದೇ ಜನಸಾಮಾನ್ಯರ ಹತ್ಯೆಗೆ ಕೇಂದ್ರ ಸರಕಾರ ಸುವ್ಯವಸ್ಥಿತ ಯೋಜನೆ ರೂಪಿಸಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಎಸ್ಐಆರ್ ಮೂಲಕ ತಮ್ಮ ಪ್ರಾಬಲ್ಯ ಸಾಧಿಸಿವೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರಮಿಯ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಓಂಕಾರ್ ತುಂಬಾ, ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಜಮಗಿ, ಜಿಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಶಿವರಾಜ್ ಗಂಗಶಟ್ಟಿ, ತಾಪಂ ಮಾಜಿ ಅಧ್ಯಕ್ಷ ರಮೇಶ್ ಡಾಕುಳಗಿ, ಪ್ರಮುಖರಾದ ಕೇಶಪ್ಪ ಬಿರಾದಾರ, ಕಂಟೆಪ್ಪ ದಾನ, ಸಿದ್ರಾಮ್ ವಾಗ್ಮಾರೆ, ಪ್ರಭು ತಾಳಮಡಗಿ, ಸತೀಷ್ ರಾಂಪೂರೆ, ದತ್ತಕುಮಾರ್ ಚಿದ್ರಿ, ಮಹೇಶ್ ಅಗಡಿ, ಕಲಾವತಿ ರಜಪೂತ್, ಅಶ್ವಿನಿ ಪಾಟೀಲ್ ಹಾಗೂ ಸುರೇಶ್ ಘಾಂಗ್ರೆ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.






