ಬೀದರ್ | ಗುಣಮಟ್ಟದ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ : ಸಂಸದ ಸಾಗರ್ ಖಂಡ್ರೆ

ಬೀದರ್ : ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಂಸದ ಸಾಗರ್ ಖಂಡ್ರೆ ಅವರು ಹೇಳಿದರು.
ಭಾಲ್ಕಿ ತಾಲೂಕಿನ ಬಾಳೂರ್ ಗ್ರಾಮದಲ್ಲಿ ಶನಿವಾರ ಗೌತಮ ಬುದ್ಧ ಶಿಕ್ಷಣ ಸಂಸ್ಥೆಯ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ, ವಾರ್ಷಿಕೋತ್ಸವ ಹಾಗೂ ಗೌತಮ ಬುದ್ಧರ ಪ್ರತಿಮೆ ಅನಾವರಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದಲೇ ದೇಶದ ಭವಿಷ್ಯ ರೂಪುಗೊಳ್ಳಲು ಸಾಧ್ಯ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಿನಂತೆ ದೇಶ ಸಾಮಾಜಿಕ, ರಾಜಕೀಯ, ಆರ್ಥಿಕ ಬೆಳವಣಿಗೆಗೆ ಶಿಕ್ಷಣ ಪೂರಕವಾಗಿದೆ ಎಂದರು.
ಗ್ರಾಮೀಣ ಭಾಗದ ಕಾರ್ಮಿಕರಿಗೆ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಮನರೇಗಾ ಹೆಸರು ಬದಲಾವಣೆ ಮಾಡುವ ಹೊಸ ಮಸೂದೆ ಕಾರ್ಮಿಕರಿಗೆ ಮಾಡುವ ಮೋಸವಾಗಿದೆ. ದೇಶದ ಸಂವಿಧಾನ ಹಕ್ಕಿನಿಂದ ಆಯ್ಕೆಯಾದ ನಾನು ಸಂವಿಧಾನವನ್ನು ರಕ್ಷಿಸುವ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬೀದರ್ ವಿವಿ ಸಿಂಡಿಕೇಟ್ ಸದಸ್ಯ ವಿಠಲದಾಸ್ ಪ್ಯಾಗೆ ಅವರು ಮಾತನಾಡಿ, ಶಿಕ್ಷಣ ಎಂಬುದು ದೊಡ್ಡ ಅಸ್ತ್ರ. ಶಿಕ್ಷಣದಿಂದಲೇ ಸಮಾಜದಲ್ಲಿ ಧನಾತ್ಮಕ ಚಿಂತನೆ ಬಿತ್ತಿ ಸಮ ಸಮಾಜ ಕಟ್ಟಲು ಸಾಧ್ಯವಿದೆ. ಗ್ರಾಮೀಣ ಭಾಗದಲ್ಲಿ ಶಾಲೆ ತೆರೆದು ಶಿಕ್ಷಣ ನೀಡುವ ಗೌತಮ ಬುದ್ಧ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಗೌತಮ ಬುದ್ಧ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕಾಶಿನಾಥ್ ಚೆಲ್ವಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಂತೆ ಧಮ್ಮದೀಪ್ ಹಾಲಹಳ್ಳಿ, ಭಾಲ್ಕಿಯ ಭಂತೆ ನೌಪಾಲ್ ಹಾಗೂ ಭಿಕ್ಕು ಸಂಘ ಸಾನಿಧ್ಯ ವಹಿಸಿ ಗೌತಮ ಬುದ್ಧ ಪ್ರತಿಮೆ ಅನಾವರಣಗೊಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಗೌತಮ ಬುದ್ಧರ ಭಾವಚಿತ್ರ ಮೆರವಣಿಗೆ ನಡೆಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ್ ಬೆಲ್ದಾರ್, ಶಿವರಾಜ್ ಹಾಸನಕರ್, ಎಲ್.ಜಿ ಗುಪ್ತಾ, ಲಕ್ಷ್ಮಿಬಾಯಿ ನಾರಾಯಣರಾವ್ ಚೆಲ್ವಾ, ಪ್ರೇಮಸಾಗರ್ ದಾಂಡೇಕರ್, ಸಿದ್ರಾಮ್ ದೇಶಮುಖ್, ದಶರಥ್ ಗುರು, ತಿಪ್ಪಣ್ಣಾ ಶಿವಪೂರೆ, ಡಿ.ಜಿ ಜಗತಾಪ, ಮಹೇಶ್ ಗೊರನಾಳಕರ್, ಪ್ರಶಾಂತ್ ದೊಡ್ಡಿ, ವಿನಯಕುಮಾರ್ ಮಾಳಗೆ, ಮನೋಹರ್ ಮೈಸೆ, ರಾಜಪ್ಪಾ ಗೂನಳ್ಳಿಕರ್, ದೀಲಿಪ್ ಭೋಸ್ಲೆ, ವಿನೋದ್ ಅಪ್ಪೆ ಹಾಗೂ ವಿನೋದಕುಮಾರ್ ಬಂದಗೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.







