ಬೀದರ್ | ಮಳೆ ಹಾನಿ : ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡದಿದ್ದರೆ ಹೋರಾಟ ; ಸೋಮನಾಥ್ ಪಾಟೀಲ್

ಬೀದರ್ : ನೆರೆಯ ಮಹಾಷ್ಟ್ರ ಸರಕಾರದ ಮಾದರಿಯಲ್ಲಿ ಮಲೆ ಹಾನಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಹಾಗೂ ಬೆಳೆ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ರೈತರ ಜೊತೆಗೆ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಅವರು ಹೇಳಿದ್ದಾರೆ.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಬಿದ್ದ ಮಳೆಗಿಂತಲೂ ಕಡಿಮೆ ಮಳೆ ಮಹಾರಾಷ್ಟ್ರದಲ್ಲಿ ಬಿದ್ದಿದೆ. ಆದರೆ ಅಲ್ಲಿನ ಸರ್ಕಾರ ರೈತರ ಪ್ರತಿ ಹೆಕ್ಟೇರ್ ಭೂಮಿಗೆ 45 ಸಾವಿರ ರೂ. ಪರಿಹಾರ ನೀಡುತ್ತಿದೆ. ಜಿಲ್ಲೆಯ ರೈತರ ಖಾತೆಗೆ ದೀಪಾವಳಿ ಹಬ್ಬದೊಳಗೆ ಕನಿಷ್ಠ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳು ಹಾನಿಯಾಗಿವೆ. ಜಿಲ್ಲೆಯಾದ್ಯಂತ ಬೆಳೆಹಾನಿ ವೀಕ್ಷಣೆ ಮಾಡಲಾಗಿದ್ದು, ಎಲ್ಲೆಡೆ ರೈತರು ತಮ್ಮ ಮುಂದೆ ಗೋಳು ತೋಡಿಕೊಂಡಿದ್ದಾರೆ. ಕೃಷಿ ಜೊತೆಗೆ ತೋಟಗಾರಿಕೆ ಬೆಳೆಗಳು ಸಹ ನಷ್ಟವಾಗಿದೆ ಎಂದರು. ಜಿಲ್ಲೆಯಲ್ಲಿ ಶೇ.90 ರಷ್ಟು ಹೆಸರು, ಉದ್ದು, ಸೋಯಾ, ಅವರೆ, ತೊಗರಿ, ಹತ್ತಿ ಇತರೆ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಆದರೆ ಜಿಲ್ಲಾಡಳಿತವು ಸರಕಾರಕ್ಕೆ ಬರೀ 1.66 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾಳಾಗಿವೆ ಎಂದು ಅವೈಜ್ಞಾನಿಕ ವರದಿ ಸಲ್ಲಿಸಿದೆ. ಆದರೆ ವಾಸ್ತವದಲ್ಲಿ 2 ಲಕ್ಷಕ್ಕೂ ಅಧಿಕ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಶೇ.67ರಷ್ಟು ಬೆಳೆ ಹಾನಿಗೊಳಗಾದ ರೈತರ ಮಾಹಿತಿಯೇ ಸಂಗ್ರಹಿಸಿಲ್ಲ. ಹೀಗಾಗಿ ಸರಕಾರ ಮತ್ತೊಮ್ಮೆ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ವರದಿ ತಯಾರಿಸಿ ಎಲ್ಲ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕ ಪ್ರಭು ಚೌವ್ಹಾಣ್ ಅವರು ಮಾತನಾಡಿ, ರಾಜ್ಯದಲ್ಲಿ ಕುರ್ಚಿಗಾಗಿ ಕಿತ್ತಾಟ ನಡೆದಿದೆ. ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ರೈತ ವಿರೋಧಿ ಸರಕಾರ ಇದಾಗಿದೆ. ಸಿದ್ದರಾಮಯ್ಯ ಕುಂಭಕರ್ಣನ ನಿದ್ದೆಯಲ್ಲಿದ್ದಾರೆ. ಕಾಂಗ್ರೆಸ್ ಸರಕಾರ ರೈತರ ಪರವಾಗಿಲ್ಲ. ಓಲೈಕೆ ರಾಜಕಾರಣ, ಗ್ಯಾರಂಟಿ ಎಂದು ಹೇಳಿಕೊಂಡು ರೈತರನ್ನು ಕಡೆಗಣಿಸಿದೆ. ಬೆಳೆ ನಷ್ಟಕ್ಕೆ ಮಧ್ಯಂತರ ಪರಿಹಾರವನ್ನೂ ನೀಡಿಲ್ಲ. ಸಮೀಕ್ಷೆಯನ್ನೂ ಸರಿಯಾಗಿ ಮಾಡುತ್ತಿಲ್ಲ. ರೈತರ ಸಾಲ ಮನ್ನಾ, ಮರು ಸಮೀಕ್ಷೆ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.18ರಂದು ಔರಾದ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಮಾತನಾಡಿ, ಸಿಎಂ ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ಕಿರಣ ಪಾಟೀಲ್, ಗುರುನಾಥ್ ರಾಜಗೀರಾ, ಬಸವರಾಜ್ ಪವಾರ್, ಗುರುನಾಥ್ ಜ್ಯಾಂತಿಕರ್ ಹಾಗೂ ಶ್ರೀನಿವಾಸ್ ಚೌಧರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







