Bidar | ಸಂವಿಧಾನ ಉಳಿಸಬೇಕಾದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತಿ : ಡಾ.ಮೀನಾಕ್ಷಿ ಬಾಳಿ

ಬೀದರ್ : ದೇವರುಗಳ ಪುಣ್ಯದಿಂದ ಮಾತಿನ ಸ್ವಾತಂತ್ರ್ಯ ಸಿಗಲಿಲ್ಲ, ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ನಮಗೆ ಮಾತನಾಡುವ ಹಕ್ಕು ದೊರಕಿದೆ. ಆದ್ದರಿಂದ ಮೂಢನಂಬಿಕೆ, ಕಂದಾಚಾರಗಳನ್ನು ಬಿಟ್ಟು ಅನ್ಯಾಯದ ವಿರುದ್ಧ ಜನರು ಧ್ವನಿ ಎತ್ತಬೇಕು ಎಂದು ಪ್ರಗತಿಪರ ಚಿಂತಕಿ ಡಾ.ಮೀನಾಕ್ಷಿ ಬಾಳಿ ಹೇಳಿದರು.
ನಗರದ ನೌಬಾದ್‌ನ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಗುರುವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಯಂತಿಗಳು ಜನರ ಜ್ಞಾನವಿಸ್ತಾರಕ್ಕೆ ಕಾರಣವಾಗಬೇಕು. ಆದರೆ ಇತ್ತೀಚೆಗೆ ಜಯಂತಿಗಳು ಜಾತಿ ಆಧಾರಿತ ಪ್ರದರ್ಶನಗಳಾಗಿ ಮಾರ್ಪಟ್ಟಿವೆ. ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಜಯಂತಿಗಳನ್ನು ಎಲ್ಲ ಸಮುದಾಯದವರು ಸೇರಿ ಆಚರಿಸಬೇಕು ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ಸಮಾನತೆ ಎಂಬುದು ಇತಿಹಾಸದಲ್ಲಿ ನೆಲೆಸಿಲ್ಲ. ಜಾತಿ ವ್ಯವಸ್ಥೆ ಈ ದೇಶಕ್ಕೆ ಅಂಟಿಕೊಂಡಿರುವ ಕಳಂಕವಾಗಿದೆ. ಸಂವಿಧಾನವೇ ರಾಷ್ಟ್ರದ ಹಿತ ಕಾಪಾಡಿದ್ದು, ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ, ಶಿಕ್ಷಣ, ಉದ್ಯೋಗ ಹಾಗೂ ಸಂಘಟನೆ ಹಕ್ಕು ನೀಡಿದೆ ಎಂದರು.
ಖಾಸಗೀಕರಣದಿಂದ ಮೀಸಲಾತಿ ಅವಕಾಶಗಳು ಕುಂಠಿತವಾಗುತ್ತಿವೆ. ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯವು ಮೂಲಭೂತ ಹಕ್ಕುಗಳಾಗಿದ್ದರೂ ಇಂದಿನ ಪರಿಸ್ಥಿತಿಯಲ್ಲಿ ಅವು ದುರ್ಬಲಗೊಂಡಿವೆ. ಜನರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಚಿಂತಕ ಮಾರುತಿ ಗೋಖಲೆ ಮಾತನಾಡಿ, ದೇಶದಲ್ಲಿ ಕೆಲವೇ ವರ್ಗದವರು ಆಡಳಿತ ಹಿಡಿದಿದ್ದು, ಸಮಾಜದ ಒಕ್ಕೂಟ ಮುರಿಯಲು ಅಸ್ಮಿತೆಯ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅನಿಲಕುಮಾರ್ ಮೇಲ್ದೊಡ್ಡಿ, ನಿಲಯ ಪಾಲಕರಾದ ಗೌತಮ್ ಚಿಂತಲಗೇರಾ, ರಾಜಶೇಖರ್, ನಿವರ್ತಿ, ಭೀಮರಾವ್ ಹಾಗೂ ವಿಜಯಲಕ್ಷ್ಮೀ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.






