ನರೇಗಾ ಯೋಜನೆಯ ಮಾನವ ದಿನಗಳ ಸೃಜನೆಯಲ್ಲಿ ಬೀದರ್‌ಗೆ 3ನೇ ಸ್ಥಾನ : ಸಿಇಓ ಡಾ.ಗಿರೀಶ್ ಬದೋಲೆ

ಬೀದರ್ : ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲಿ ಬೀದರ್ ಜಿಲ್ಲೆಗೆ 3ನೇ ಸ್ಥಾನ ಲಭಿಸಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ತಿಳಿಸಿದ್ದಾರೆ.
ಮಹಾತ್ಮಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅತೀ ಸಣ್ಣ ರೈತ ಮತ್ತು ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸಿಕೊಟ್ಟು ಅವರ ಸ್ವಾವಲಂಬಿ ಬದುಕಿಗೆ ಆಸರೆಯಾಗುವ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯ ಅಡಿಯ 2024-25ನೇ ಸಾಲಿನಲ್ಲಿ ಬೀದರ್ ಜಿಲ್ಲೆಯು ಅತೀ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ಜಿಲ್ಲೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಗೆ 2024-25ನೇ ಸಾಲಿನಲ್ಲಿ 50 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ಮಾ.31 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಜಿಲ್ಲೆಯು 62,28,784 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.130.58 ಸಾಧನೆ ಮಾಡಿ ರಾಜ್ಯದಲ್ಲಿ ಅತೀ ಹೆಚ್ಚು ಮಾನವ ದಿನ ಸೃಜನೆ ಮಾಡಿದ ಜಿಲ್ಲೆಗಳಲ್ಲಿ 3ನೇ ಸ್ಥಾನವನ್ನು ಪಡೆದಿದೆ. ಹಾಗೆಯೇ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಮೊದಲನೆ ಸ್ಥಾನದಲ್ಲಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ 2,57,344 ಉದ್ಯೋಗ ಚೀಟಿಗಳಿದ್ದು, ಅದರಲ್ಲಿ 1,62,841 ಕ್ರಿಯಾಶೀಲ ಉದ್ಯೋಗ ಚೀಟಿಗಳಿರುತ್ತವೆ. 2024-25ನೇ ಸಾಲಿನಲ್ಲಿ 1,27,932 ಕುಟುಂಬಗಳಿಗೆ ಕೂಲಿ ನೀಡಲಾಗಿದೆ. ಅದರಲ್ಲಿ 31,190 ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದ್ದರೆ, 22,524 ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಸೇರಿವೆ. ಅತೀ ಸಣ್ಣ ರೈತರು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಕುಟುಂಬಗಳು 74,217 ಆಗಿವೆ. ಒಟ್ಟು ಕೂಲಿಕಾರರಲ್ಲಿ 1,07,984 ಮಹಿಳೆಯರಿಗೆ ಕೂಲಿ ಕೆಲಸ ನೀಡಲಾಗಿದೆ. ಒಟ್ಟು ಸೃಜಿಸಿದ 62,28,784 ಮಾನವ ದಿನಗಳಲ್ಲಿ 35,62,252 ಮಾನವ ದಿನಗಳು ಮಹಿಳಾ ಕೂಲಿಕಾರರಿಂದ ಸೃಜಿಸಲಾಗಿದೆ. ಇದರ ಪ್ರತಿಶತ 54.56 ಆಗಿರುತ್ತದೆ. ಒಟ್ಟು 519 ವಿಕಲಚೇತನರಿಗೆ ಕೂಲಿ ಕೆಲಸ ನೀಡಲಾಗಿದೆ. 1,033 ಕುಟುಂಬಗಳ ಕೂಲಿಕಾರರು ಪೂರ್ಣ 100 ದಿನಗಳ ಕೆಲಸ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಹಾತ್ಮಗಾಂಧಿ ನರೇಗಾ ಯೋಜನೆಯು ಜಿಲ್ಲೆಯ ಗ್ರಾಮೀಣ ಪ್ರದೇಶದ ಕುಟುಂಬಗಳ ಆರ್ಥಿಕ ಪುನಶ್ಚೇತನಕ್ಕೆ ನೆರವಾಗುವುದಲ್ಲದೆ, ಬಡ ಕೂಲಿಕಾರ್ಮಿಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವಲ್ಲಿ ಸಹಕಾರಿಯಾಗಿದೆ. ಹಾಗಾಗಿ ಸಾರ್ವಜನಿಕರು ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.







