ಬೀದರ್ | ಸರಕಾರಿ ಶಾಲೆಯ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ : ಚೇತನ್ ಸೊರಳ್ಳಿ

ಬೀದರ್ : ಸರ್ಕಾರಿ ಶಾಲೆಯ ಮಕ್ಕಳಲ್ಲಿ ಹೆಚ್ಚಿನ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಇರುತ್ತದೆ. ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಚೇತನ್ ಸೊರಳ್ಳಿ ಹೇಳಿದರು.
ಇಂದು ಅತಿವಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ನೀತಾ ಬೆಲ್ದಾಳೆ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.
ಹಳ್ಳಿಯ ಮಕ್ಕಳು ಬಹುಮುಖ ಪ್ರತಿಭೆ ಉಳ್ಳವರು, ಹಳ್ಳಿಯ ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ಸಿಕ್ಕರೆ ಉನ್ನತ ಸಾಧನೆ ಮಾಡುತ್ತಾರೆ. ಶಾಸಕ ಡಾ. ಶೈಲೆಂದ್ರ ಬೆಲ್ದಾಳೆ ಅವರು ಸದಾ ಕಾಲವೂ ಜನರ ಸಮಸ್ಯೆಗೆ ಸ್ಪಂದಿಸುತ್ತ ಜನರ ಹೃದಯದಲ್ಲಿ ನೆಲೆ ನಿಂತಿದ್ದಾರೆ. ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ, ಆರೋಗ್ಯ, ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಡಾ.ನೀತಾ ಬೆಲ್ದಾಳೆ ಮಾತನಾಡಿ, ಇಂದಿನ ಮಕ್ಕಳೇ ದೇಶದ ನಾಳಿನ ಉತ್ತಮ ಪ್ರಜೆಗಳು. ಗ್ರಾಮೀಣ ಪ್ರದೇಶದ ಮಕ್ಕಳ ಭೌತಿಕ ವಿಕಾಸವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು. ಸರ್ಕಾರಿ ಶಾಲೆಯ ಮಕ್ಕಳಲ್ಲಿ ಅನನ್ಯ ಪ್ರತಿಭೆ ಇದೆ. ವಿದ್ಯಾರ್ಥಿಗಳು ಆ ಪ್ರತಿಭೆಯನ್ನು ಸೂಕ್ತವಾಗಿ ಬಳಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ವೈಜಿನಾಥ್ ಹುಣಸಗೆರೆ, ಹಣಮಂತರಾವ್ ಮೈಲಾರೆ, ಸತೀಶ್ ಸಿಕಿಂದಪೂರೆ, ಶಿವಕುಮಾರ್ ಕೊಳ್ಳಾರೆ, ರಾಜಶೇಖರ್ ನೌಬಾದೆ, ರೆವಣಪ್ಪಾ ಚಿಲರ್ಗೆ, ಯುವ ಮುಖಂಡ ಅಮರ್ ಚಾಂಬಳೆ, ವಿಶಾಲ್ ಅತಿವಾಳೆ, ವಿರೇಶ್ ಬಿರಾದಾರ್ ಹಾಗೂ ಸಂಗಮೇಶ್ ಉದಿಗೀರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







