ಬೀದರ್ | ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ದಾಖಲಿಸಿ : ರಮೇಶ್ ಡಾಕುಳಗಿ

ಬೀದರ್: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸಿ, ಸಂವಿಧಾನದ ಆಧಾರದ ಮೇಲೆ ಮೀಸಲಾತಿ ಅನುಭವಿಸುತ್ತಿರುವ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಯ ಜನಾಂಗದವರು, ಜಾತಿ ಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಎಂದು, ಜಾತಿ ಕಾಲಂನಲ್ಲಿ ತಮ್ಮ ತಮ್ಮ ಜಾತಿಯನ್ನು ದಾಖಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಗಿ ಕರೆ ನೀಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸೆ.22ರಿಂದ ಪ್ರಾರಂಭವಾಗಲಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಅನುಯಾಯಿಗಳು ತಮ್ಮ ಧರ್ಮವನ್ನು ಬೌದ್ಧ ಎಂದು ದಾಖಲಿಸಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯದ ಬೌದ್ಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಬೌದ್ಧ ಉಪಸಕರು, ದಲಿತ ಸಂಘಟನೆಗಳ ನಾಯಕರು ಹಾಗೂ ಸಮಾಜದ ಮುಖಂಡರು ಸೇರಿ ಸೆ.13ರಂದು ಬೆಂಗಳೂರಿನ ನಾಗಸೇನ ಬುದ್ಧ ವಿಹಾರದಲ್ಲಿ ಸಭೆ ನಡೆಸಿದ್ದರು. ಆ ಸಭೆಯಲ್ಲಿ ರಾಜ್ಯ ಮಟ್ಟದ ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಅಂದೋಲನ ಸಮಿತಿ ರಚಿಸಲಾಯಿತು. ಇದೇ ವಿಚಾರವಾಗಿ ಸೆ.18ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಜರುಗಿದ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಸಭೆಯಲ್ಲಿ ಧರ್ಮ ಕಾಲಂನಲ್ಲಿ ಬೌದ್ಧ ಎಂದು ದಾಖಲಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
1999ರಲ್ಲಿ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮೂಲಕ ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರಿಗೂ ಶೈಕ್ಷಣಿಕ, ಉದ್ಯೋಗ ಹಾಗೂ ರಾಜಕೀಯ ಮೀಸಲಾತಿ ಯಥಾವತ್ತಾಗಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಧರ್ಮ ಕಾಲಂನಲ್ಲಿ ಬೌದ್ಧ ಎಂದು ದಾಖಲಿಸಿದರೂ ಮೀಸಲಾತಿ ಸೌಲಭ್ಯಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ದಲಿತ ಮಹಿಳೆಯೊಬ್ಬಳು ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡಲು ಅರ್ಹರಲ್ಲ ಎಂಬ ಹೇಳಿಕೆ ನೀಡಿರುವುದನ್ನು ಖಂಡಿಸಿದ ಅವರು, “ಈ ಹೇಳಿಕೆ ಇಡೀ ಮಹಿಳಾ ಸಮಾಜ ಹಾಗೂ ದಲಿತ ಸಮುದಾಯದ ಗೌರವಕ್ಕೆ ಧಕ್ಕೆ ತರುವಂತದ್ದು. ಇಂಥ ಅಸಂವಿಧಾನಿಕ ಹೇಳಿಕೆಯನ್ನು ದಲಿತ ಸಮುದಾಯ ತೀವ್ರವಾಗಿ ವಿರೋಧಿಸುತ್ತದೆ,” ಎಂದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ತುಕಾರಾಮ್ ಲಾಡಕರ್, ರಮೇಶ್ ಮಂದಕನಳ್ಳಿ, ಶಿವರಾಜ್ ಲಾಡಕರ್, ವಿಠಲ್ ಲಾಡಕರ್, ರಾಜಕುಮಾರ್ ಚಂದನ್, ಅಂಕುಶ್ ಡಾಂಗೆ, ಅಂಬರೀಶ್ ಅತಿವಾಳ್, ರವೀಂದ್ರ ಭಾಲ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







