ಬೀದರ್ | ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಕಾನೂನು ಕ್ರಮಕ್ಕೆ ಮನವಿ

ಬೀದರ್: ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಗಂಧಾ ಅವರು ಗುಂಡಾ ವರ್ತನೆ ತೋರುತ್ತಿದ್ದು, ಅವರ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಹುಮನಾಬಾದ್ ತಹಶೀಲ್ದಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಸಾಮಾಜಿಕ ಕಾರ್ಯಕರ್ತ ಯುವರಾಜ್ ಐಹೊಳ್ಳಿ ಅವರು “ಬಸವೇಶ್ವರ್ ವೃತ್ತದಲ್ಲಿ ನೀರು ನಿಲ್ಲುತ್ತಿದೆ, ದಯವಿಟ್ಟು ಸರಿಪಡಿಸಿ” ಎಂದು ಹೇಳಿದ ವೇಳೆ, ಪಿಡಿಒ ಸುಗಂಧಾ ಅವರು “ನೀನು ನಿನ್ನ ಅಂಬೇಡ್ಕರ್ ಮೂರ್ತಿ ಬಗ್ಗೆ ಮೊದಲು ವಿಚಾರ ಮಾಡು. ಬಸವೇಶ್ವರ್ ವೃತ್ತದ ಹತ್ತಿರ ನೀರು ನಿಂತರೆ ನಿನಗ್ಯಾಕೆ ಸಮಸ್ಯೆ? ಆ ಸಮುದಾಯದವರು ಬಂದು ಕೇಳಲಿ” ಎಂದು ಹೇಳಿ ಜಾತಿ ತಾರತಮ್ಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, “ನೀವು ಎಲ್ಲದಕ್ಕೂ ರೆಡಿ ಇದ್ದರೆ ಬನ್ನಿ. ಏನು ಮಾಡಬೇಕು ಅದನ್ನು ಮಾಡಿ ತೋರಿಸ್ತೀನಿ” ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಯುವರಾಜ್ ಐಹೊಳ್ಳಿ ಅವರಿಗೆ ಏನಾದರೂ ತೊಂದರೆಯಾದರೆ, ಅದರ ನೇರ ಹೊಣೆ ಪಿಡಿಒ ಸುಗಂಧಾ ಅವರೇ ಆಗಿರುತ್ತಾರೆ ಎಂದು ಮನವಿಯಲ್ಲಿ ಹೇಳಲಾಗಿದೆ. ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ತಾಲ್ಲೂಕು ಪಂಚಾಯತ್ ಕಚೇರಿ ಎದುರು ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಯುವರಾಜ್ ಐಹೊಳ್ಳಿ, ಆಶ್ರಯ ದೀಪ ಟ್ರಸ್ಟ್ ಉಪಾಧ್ಯಕ್ಷ ಅರವಿಂದ್ ಜೋಗಿರೆ, ಗುರು ಪಾಟೀಲ್ ಸಿಂಧನಕೇರಾ, ಭೀಮ್ ಆರ್ಮಿ ತಾಲೂಕು ಉಪಾಧ್ಯಕ್ಷ ಶೇಖ್ ಫಿರ್ದೋಸ್, ಎಂ.ಡಿ. ಬಾಬಾ ಪಟೇಲ್, ಮಲ್ಲೇಶ್ ಮಿತ್ರ, ಶೇಖ್ ಅಮಾನ್ ಸುಲ್ತಾನಿ, ಮೈನೋದ್ದಿನ್ ನಂದಗಾಂವವಾಲೆ, ಅಮರ್ ಹಾಗೂ ಸಂದೀಪ್ ಉಪಸ್ಥಿತರಿದ್ದರು.







