ಬೀದರ್ | ಟೇಬಲ್ ಟೆನಿಸ್ ಹಾಲ್ ಸೌಲಭ್ಯಗಳ ನವೀಕರಣಕ್ಕೆ ಮನವಿ

ಬೀದರ್ : ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ಟೇಬಲ್ ಟೆನಿಸ್ ಹಾಲ್‌ನ ಮೂಲಸೌಕರ್ಯಗಳನ್ನು ನವೀಕರಿಸುವಂತೆ ಟೇಬಲ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಯುವ ಸೇವೆಗಳ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಮನವಿ ಪತ್ರದಲ್ಲಿ, ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಮಕ್ಕಳು ಹಾಗೂ ಯುವಕರ ಭಾಗವಹಿಸುವಿಕೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತರಬೇತಿ ಹಾಗೂ ಪಂದ್ಯಾವಳಿಗಳನ್ನು ಸುರಕ್ಷಿತ ಮತ್ತು ವೃತ್ತಿಪರ ರೀತಿಯಲ್ಲಿ ಆಯೋಜಿಸಲು ಅಗತ್ಯವಾದ ಮೂಲಸೌಕರ್ಯ ಒದಗಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ.
ಹಾಲ್‌ನಲ್ಲಿ ಆಟಗಾರರಿಗೆ ಗಾಯಗಳಾಗದಂತೆ ಹಾಗೂ ಆಟದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ರಬ್ಬರ್ ಅಥವಾ ಮರದ ಕ್ರೀಡಾ ನೆಲಹಾಸು ಅಳವಡಿಕೆ, ಹಳೆಯದಾಗಿ ನಾಶಗೊಂಡಿರುವ ಟೇಬಲ್ ಟೆನಿಸ್ ಮೇಜುಗಳನ್ನು ತೆಗೆದು ಹೊಸ ಮೇಜುಗಳನ್ನು ಒದಗಿಸುವುದು, ಜೊತೆಗೆ ಆಟಗಾರರ ಸುರಕ್ಷತೆ ಮತ್ತು ಉತ್ತಮ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಮಿಂಚಿಲ್ಲದ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬೀದರ್ ಜಿಲ್ಲೆಯ ಕ್ರೀಡಾಪಟುಗಳು ಸುರಕ್ಷಿತ ಹಾಗೂ ಮಾನದಂಡಗಳಿಗೆ ಅನುಗುಣವಾದ ಸೌಲಭ್ಯಗಳನ್ನು ಪಡೆಯುವಂತೆ ಈ ಮನವಿಯನ್ನು ತ್ವರಿತವಾಗಿ ಪರಿಗಣಿಸಬೇಕೆಂದು ಅಸೋಸಿಯೇಷನ್ ಕೋರಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ರಾಜಶೇಖರ್ ಜವಳೆ, ಕಾರ್ಯದರ್ಶಿ ವಿರೇಶ್ ಎಸ್. ವಡ್ಡಿ ಹಾಗೂ ಅಸೋಸಿಯೇಷನ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.







